ಸಸ್ಯಾಹಾರಿಗಳಿಗೇಕೆ ಹಲಾಲ್, ಜಟ್ಕಾ ಕಟ್ ಉಸಾಬರಿ? - Mahanayaka
10:11 PM Thursday 14 - November 2024

ಸಸ್ಯಾಹಾರಿಗಳಿಗೇಕೆ ಹಲಾಲ್, ಜಟ್ಕಾ ಕಟ್ ಉಸಾಬರಿ?

halal jhatka cut
03/04/2022

ಕಳೆದ ಹಲವು ದಿನಗಳಿಂದ ಹಲಾಲ್ ಕಟ್, ಜಟ್ಕಾ ಕಟ್ ಮಾಂಸದ ವಿಚಾರವಾಗಿ ರಾಜ್ಯದಲ್ಲಿ ನಡೆದಿದ್ದ ರಾಜಕೀಯ ನಾಟಕೀಯ ಬೆಳವಣಿಗೆ ಇಂದು ಸಮಾರೋಪಗೊಂಡಂತಾಗಿದೆ. ಜಟ್ಕಾ ಕಟ್ ಅಭಿಯಾನವು ರಾಜ್ಯ ಸರ್ಕಾರಕ್ಕೆ ತಿರುಗು ಬಾಣವಾಗಿದ್ದು, ಜನರು ತಮಗೆ ಅನುಕೂಲಕರವಾಗುವ ಸ್ಥಳಗಳಿಂದ ಮಾಂಸ ಖರೀದಿಸುವ ಮೂಲಕ ವಿವಾದಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ.

ಹಲಾಲ್ ಕಟ್ , ಜಟ್ಕಾ ಕಟ್ ವಿವಾದಕ್ಕೆ ಸರ್ಕಾರವೇ ಕುಮ್ಮಕ್ಕು ನೀಡಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿದ್ದು, ರಾಜ್ಯ ಸರ್ಕಾರ ಜನಾಂಗವೊಂದನ್ನು ಟಾರ್ಗೆಟ್ ಮಾಡುತ್ತಿದೆ ಆಡಳಿತ ಪಕ್ಷದ ಶಾಸಕರು, ಸಚಿವರು ತಾವು ಸ್ವೀಕರಿಸಿದ ಪ್ರಮಾಣ ವಚನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಜನಾಂಗಗಳ ನಡುವಿನ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

ಸಸ್ಯಹಾರಿಗಳಿಗೇಕೆ ಈ ಉಸಾಬರಿ?

ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿಚಾರದಲ್ಲಿ ಕೆಲವು ಸಸ್ಯಾಹಾರಿಗಳು ಭೇದ ಸೃಷ್ಟಿಸುತ್ತಿದ್ದಾರೆ. ಹಲಾಲ್ ಕಟ್ ಮಾಂಸ ಸೇವಿಸಿದರೆ, ಕ್ಯಾನ್ಸರ್ ಬರುತ್ತದೆ ಎಂದೆಲ್ಲ ಅಮಾಯಕ ಜನರನ್ನು ಭೀತಿಗೊಳಿಸುತ್ತಿದ್ದಾರೆ. ಮಾಂಸ ತಿನ್ನದವರು, ಮಾಂಸಾಹಾರವನ್ನು ಪ್ರತಿ ಹಂತದಲ್ಲೂ ವಿರೋಧಿಸುತ್ತಿರುವವರು ಹಲಾಲ್ ಕಟ್, ಜಟ್ಕಾ ಕಟ್ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು. ಯಾವ ಕಟ್ ಮಾಂಸವನ್ನು ಸೇವಿಸಬೇಕು ಎನ್ನುವುದನ್ನು ಮಾಂಸಾಹಾರಿಗಳೇ ನಿರ್ಧರಿಸುತ್ತಾರೆ. ಹೊರಗಿನವರಿಗೆ ಈ ವಿಚಾರಗಳು ಯಾಕೆ ಎನ್ನುವ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೀಡಾಗುತ್ತಿದೆ.




ಅತಿಯಾದರೆ ಅಮೃತವೂ ವಿಷ:

ರಾಜ್ಯದಲ್ಲಿ ಒಂದರ ಹಿಂದೊಂದರಂತೆ ವಿವಾದಗಳನ್ನು ಎಬ್ಬಿಸಲಾಗಿದೆ. ಮೊದಲು ಮತಾಂತರ ವಿವಾದ ಆರಂಭವಾಯ್ತು. ಆ ಬಳಿಕ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬಾರದು ಅನ್ನೋ ವಿವಾದ ಶುರುವಾಯ್ತು, ಹಿಜಾಬ್ ವಿವಾದ ಶುರುವಾಯ್ತು, ಅದರ ಬೆನ್ನಲ್ಲೇ ಹಲಾಲ್, ಜಟ್ಕಾ ಕಟ್ ವಿವಾದವೂ ಶುರುವಾಯ್ತು.  ಜನರು ಕೇವಲ ವಿವಾದವನ್ನು ನೋಡಿಕೊಂಡು ಕೂರಬೇಕೇ? ಯಾರನ್ನೇ ಆದರೂ ವಿರೋಧಿಸಲೇ ಬೇಕು ಎಂದು ಟಾರ್ಗೆಟ್ ಮಾಡಿ ವಿರೋಧಿಸುವುದು ಎಷ್ಟು ದಿನಗಳ ಕಾಲ ನಡೆಯಲು ಸಾಧ್ಯ? ಜನರು ಟಿವಿ ನೋಡಲು ಹಿಂಸೆ ಆಗುತ್ತಿದೆ ಎನ್ನುವ ಮಟ್ಟಕ್ಕೆ ಹಲಾಲ್, ಜಟ್ಕಾ ವಿವಾದ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಇದು ಅತೀ ಅನ್ನಿಸಲಿಲ್ಲವೇ? ಎಂದು ಜನರೇ ಪ್ರಶ್ನಿಸುವಂತಾಗಿದೆ.

ಬೆಲೆ ಏರಿಕೆ ಮರೆಮಾಚಲು ಈ ಸರ್ಕಸ್?

ದೇಶಾದ್ಯಂತ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ, ಇದ್ಯಾವುದು ಕೂಡ ಮಾಧ್ಯಮಗಳಲ್ಲಿ ಚರ್ಚೆಗೀಡಾಗುತ್ತಲೇ ಇಲ್ಲ. ಕೊವಿಡ್ ಹೊಡೆತದಿಂದ ಜನರು ಸ್ವಲ್ಪದರಲ್ಲೇ ಚೇತರಿಸಿಕೊಂಡಿದ್ದಾರೆ. ಇದರ ನಡುವೆಯೇ ಬೆಲೆ ಏರಿಕೆ ಅನ್ನೋ ಪೀಡೆ ಬಿಟ್ಟು ಬಿಡದಂತೆ ಜನರನ್ನು ಕಂಗಾಲಾಗಿಸುತ್ತಿದೆ. ಇಂತಹ ವಿಚಾರಗಳನ್ನು ದೃಶ್ಯ ಮಾಧ್ಯಮಗಳು ಯಾಕೆ ಚರ್ಚೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿದೆ.

ಮಾಂಸಾಹಾರಿಗಳಿಗೆ ಯಾವ ಮಾಂಸ ಉತ್ತಮವಾಗಿರುತ್ತದೆ, ಯಾವ ಮಾಂಸ ಉತ್ತಮವಾಗಿರುವುದಿಲ್ಲ ಎನ್ನುವ ಅರಿವು ಇರುತ್ತದೆ. ಜನರು ತಮಗೆ ಸಮೀಪ ಇರುವ ಸ್ಟಾಲ್ ಗಳಿಗೆ ಹೋಗಿ ಮಾಂಸವನ್ನು ಕೊಂಡುಕೊಳ್ಳುತ್ತಾರೆ. ಮಾಂಸದ ಅಂಗಡಿಯಲ್ಲಿ ಕೂಡ ಅಷ್ಟೆ. ನಿನ್ನ ಜಾತಿ ಯಾವುದು? ನಿನ್ನ ಧರ್ಮ ಯಾವುದು ಎಂದು ಪ್ರಶ್ನಿಸಿ, ಮಾಂಸ ಖರೀದಿಸುವ ಸಂಪ್ರದಾಯ ಕೂಡ ಇಲ್ಲ. “ಬನ್ನಿ ಅಣ್ಣ, ಬನ್ನಿ ಅಕ್ಕ” ಎನ್ನುವ ಸಹೋದರತೆಯ ಮಾತುಗಳು ಕೂಡ ಮಾರ್ಕೆಟ್ ನಲ್ಲಿ ಕೇಳಿ ಬರುತ್ತದೆ. ಇಂತಹ ಬಾಂಧವ್ಯಗಳನ್ನು ಹಾಳುಗಡವುದು ಎಷ್ಟು ಸರಿ. ಮಾಂಸಾಹಾರಿಗಳ ವಿಚಾರಕ್ಕೆ ಕೆಲವು ಸಸ್ಯಾಹಾರಿಗಳು ಅನಗತ್ಯವಾಗಿ ಕೈ ಹಾಕುವುದು ಸರಿಯಲ್ಲ, ಯಾವುದಾದರೊಂದು ತರಕಾರಿಯನ್ನು ತಿನ್ನಬೇಡಿ ಎಂದು ಮಾಂಸಾಹಾರಿಯೊಬ್ಬ ಹೇಳಿದರೆ, ಅದನ್ನು ಯಾರಾದ್ರೂ ಸಸ್ಯಾಹಾರಿಗಳು ನಿಷೇಧ ಮಾಡ್ತಾರಾ? ಇದು ಕೂಡ ಹಾಗೆಯೇ ಹಲಾಲ್ ಆಗಲಿ ಜಟ್ಕಾ ಕಟ್ ಮಾಂಸವೇ ಆಗಲಿ ಯಾರಿಗೆ ಸಮೀಪದಲ್ಲಿ ಯಾವ ಮಾಂಸದ ಅಂಗಡಿ ಇದೆಯೋ ಅಲ್ಲಿಂದ ಜನರು ಮಾಂಸ ಖರೀದಿ ಮಾಡುತ್ತಾರೆ. ಆಚಾರ ವಿಚಾರದ ಭೇದಗಳನ್ನು ಸೃಷ್ಟಿಸುವುದಾದರೆ, ದೇಶದಲ್ಲಿ ಸೌಹಾರ್ದತೆ ಉಳಿಯುತ್ತಾ? ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ ಅದನ್ನು ಅರಿತು ಪ್ರತಿಯೊಬ್ಬರು ಬಾಳಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಐಸಿಯುನಲ್ಲಿದ್ದ ರೋಗಿಯನ್ನು ಕಚ್ಚಿ ಕೊಂದ ಇಲಿಗಳು

ಮಹಿಳೆಯ ಮೇಲೆ ಹಲ್ಲೆ: ಸಾಮಾಜಿಕ ಕಾರ್ಯಕರ್ತ ಸಹಿತ ಮೂವರ ಬಂಧನ

80 ಸಾವಿರ ರೂ. ಖರ್ಚು ಮಾಡಿ ಪ್ರೀತಿಯ ನಾಯಿಯ ಪ್ರತಿಮೆ ನಿರ್ಮಿಸಿದ ಯಜಮಾನ!

ಲೋಕಾರ್ಪಣೆಯಾಗಲಿದೆ ಸ್ಮಾರ್ಟ್‌ ಬಸ್‌ ಪಾಸ್‌: ಈ ಆ್ಯಪ್ ನ ವಿಶೇಷತೆ ಏನು?

ಮೊಸಳೆಯ ಬಾಯಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಯುವಕ!

ಇತ್ತೀಚಿನ ಸುದ್ದಿ