ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06 - Mahanayaka
10:42 AM Thursday 14 - November 2024

ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06

kanada katada
15/11/2021

  • ಸತೀಶ್ ಕಕ್ಕೆಪದವು

ಅಂದು ಮುಂಜಾನೆ, ದೇಯಿ ಬೈದೆದಿಯು ಸೂರ್ಯೊದಯ ಕಾಲದಲ್ಲಿ ಎದ್ದು ಕೈಕಾಲು ಮುಖ ತೊಳೆದು ಮೂಡಣ ದಿಕ್ಕಿಗೆ ವಂದಿಸಿ ಬಿಂದಿಗೆ ನೀರು, ಕಾಡಪುಷ್ಪದೊಂದಿಗೆ ಮನೆದೈವಗಳನ್ನು ಸ್ತುತಿಸಿ ಮತ್ತೆ ಹೊರಗಡೆ ಬಂದು ಬೊಲ್ಲೆಯು  ಕಾಣದಿರುವುದನ್ನು ಗಮನಿಸಿ ” ಬೊಲ್ಲೆ…. ಬೊಲ್ಲೆ…… ” ಎಂಬುದಾಗಿ  ಸ್ವರವೆತ್ತಿ ಕೂಗಿದಾಗಲೂ ಮೌನ ಆವರಿಸಿರುವುದನ್ನು ಕಂಡು ಸುತ್ತ ಮುತ್ತ ಹುಡುಕಾಟಕ್ಕೆ ಆರಂಭಿಸುತ್ತಾಳೆ. ಅಷ್ಟು  ಹೊತ್ತಿಗೆ ಪಕ್ಕದಲ್ಲಿರುವ ಕೊಟ್ಟಿಗೆಯಿಂದ ಬೊಲ್ಲೆಯ ಕೆಮ್ಮುವಿನ ಮೆಲುದನಿ ಕೇಳಿ ಬರುತ್ತದೆ. ಅತ್ತ ಗಮನಿಸಿದಾಗ ತಲೆಬಾಗಿ ಗೋಡೆ ಚಿವುಟಿ ನಿಂತಿರುವ ನಾಚಿಕೆಯ ಬಾಲೆ ಬೊಲ್ಲೆಯ ದೇಹ ಸ್ಥಿತಿ ಬದಲಾಗಿರುವುದನ್ನು ಅರ್ಥೈಸಿಕೊಂಡು, ಬೊಲ್ಲೆಯು ಮೈನರೆದು ಹೆಣ್ತನದ ಪ್ರೌಢಿಮೆಗೆ ಹೆಜ್ಜೆ ಹಾಕಿರುವುದನ್ನು ಹಿರಿಯವ್ವ ಬೊಮ್ಮಿಯನ್ನು ಕರೆದು ಮೆಲ್ಲಗೆ ಪಿಸು ಮಾತಿನಲ್ಲಿ ತಿಳಿಸುತ್ತಾಳೆ. ಹೆಣ್ಣಿಗೆ ಇದರಿಂದ ಮಿಗಿಲಾದ ಸಂತೋಷ ಬೇರೊಂದು ಉಂಟೆ ?  ವಿಚಾರ ತಿಳಿದ ಬೊಮ್ಮಿಯು ಓಡೋಡಿ ಬಂದು ಬಾಲೆ ಬೊಲ್ಲೆಯ ಹಣೆಗೊಂದು ಮುತ್ತೊಂದನ್ನಿತ್ತು  ತಬ್ಬಿಕೊಳ್ಳುವಳು. ಜೊತೆಗೆ ಹಿರಿಯರೆಲ್ಲರು ಸೇರಿಕೊಂಡು ಪಾಂಬಲಜ್ಜಿಗ ಪೂಂಬಲಕರಿಯರನ್ನು ಬರಮಾಡಿಕೊಂಡು ಅವರಿಗೂ ವಿಚಾರ ತಿಳಿಯಪಡಿಸಿ, ಆಸುಪಾಸಿನಲ್ಲಿ  ಸಂತಸವು ಮನೆಮಾತಾಗುತ್ತದೆ. ಹಿರಿಯ ಮಹಿಳೆಯರು ಮೈನರೆದು ಮದುಮಗಳನ್ನು ಸ್ನಾನ ಮಾಡಿಸಲು ನೀರಿನ ಸಿದ್ದತೆ ಮಾಡಿದರೆ,  ಇನ್ನೂ ಕೆಲವರು ಅಡಿಕೆಯ ತುಂಡೊಂದನ್ನು ವೀಳ್ಯದೆಲೆಯ ನಡುವಿಗಿಟ್ಟು ಜಗಿಯುತ್ತಾ  ಬೊಲ್ಲೆಯ ಸೌಂದರ್ಯವನ್ನು ಹೊಗಳಿಕೊಂಡು ಮುಖಕ್ಕೆ ಕೈ ಏರಿಸಿ ಹರ್ಷದಿಂದ್ದರು. ಉಳಿದವರು ಆಕೆಯ ಗುಣ ಸ್ವಭಾವವನ್ನು ಮೆಲುಕು ಹಾಕಿ ಆನಂದ ಪಡುತ್ತಿದ್ದರು. ಇನ್ನೊಂದೆಡೆ ದಪ್ಪ ಹುಬ್ಬು, ಇಳಿ ಮೀಸೆ , ಕುರುಚಲು ಗಡ್ಡದ ಉದ್ದನೆಯ ವ್ಯಕ್ತಿ ತುಂಬಾ ಗಂಭೀರವಾಗಿ ಸಮಾಲೋಚನೆ ನಡೆಸುವಂತೆ ದೂರದಿಂದ ಕಾಣುತ್ತಿತ್ತು. ಅದು ಮತ್ತೇನೂ ಅಲ್ಲ, ಮನ್ಸರ ಕೂಡುಕಟ್ಟಿನ ಬೊಟ್ಯದನ ಜವಾಬ್ದಾರಿಯ ನಿರ್ವಹಣೆಯ ಚತುರತೆಯೆಂಬುದು  ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಉಳಿದವರೆಲ್ಲ ಬೊಟ್ಯದನ ಸಲಹೆ ಸೂಚನೆಗಳನ್ನು ಸಮ್ಮತಿಸುವಂತೆ ತಲೆದೂಗಿಸಿ ಹೌದೆನ್ನುತಿರುವುದು ಸಂಘಟಿತ ಪ್ರಬುದ್ಧತೆಗೆ ಸಾಕ್ಷಿಯಾಗಿತ್ತು. ಬಾಲೆ ಬೊಲ್ಲೆಯು  ಪ್ರಾಯ ಪ್ರಬುದ್ಧಳಾಗಿ ಬದುಕಿನ ಮೇಲ್ದರ್ಜೆಗೆ ತಲುಪುವ ರೀತಿ ನೀತಿಗಳನ್ನು ಬೋಧಿಸುವ ಮೂಲಕ ಜವಾಬ್ದಾರಿಯ ಮಗ್ಗುಲುಗಳನ್ನು ವಿವರಿಸಲಾಗುತ್ತಿತ್ತು. ಬಾಲೆ ಬೊಲ್ಲೆಯು ವಿನಯ ಪೂರ್ವಕ ಗ್ರಹಿಸುತ್ತಿದ್ದಳು.

ಹಿರಿಯರಾದ ಧರ್ಮಸ್ಥಳ ದಿವಂಗತ  ಕೊರಗಪ್ಪ ಗುರಿಕಾರರವರ “ಸಾರಮುಪ್ಪಣ್ಯ ಕಾನದ ಕಟದ” ಯಕ್ಷಗಾನ ಪ್ರಸಂಗದಲ್ಲಿ ದೇಯಿಬೈದೆದಿಯು ಬನ್ನಿಸುವ ಭಾಗವತಿಕೆಯ ಹಾಡು ” …….ದಿನ ಪದ್ರಡಾಂಡ್ ಲ ಮುದರಟ್ಟ್ ದಿನಿಕ್ ” ಎಂಬ ಸಾಲುಗಳು ಮನ್ಸರ ಭಾಷಿಕ ಮೌಲ್ಯವನ್ನು ಎತ್ತಿ ತೋರಿಸುತ್ತದೆ. “ಮುದರಟ್ಟುನ” ಎಂಬ  ತುಳು ಶಬ್ದವು ಹೆಣ್ಮಗಳು ಪ್ರಾಯ ಪ್ರಬುದ್ಧಳಾದಳು ಎಂಬುದನ್ನು ಸೂಚಿಸುವ ಪದ ಬಳಕೆಯಾಗಿದೆ. ಅತ್ಯದ್ಭುತ ಐತಿಹಾಸಿಕ ಶಬ್ದವು ಸಾಂಸ್ಕೃತಿಕ ಬದುಕನ್ನು ಬಿಂಬಿಸುವ ಸೂಚ್ಯವಾಗಿದ್ದು ಬಲ್ಲವರೆ ಬಲ್ಲರು ಬೆಲ್ಲದ ಸವಿಯ ಎಂಬಂತೆ ತಮ್ಮ ಅಸ್ಮಿತೆಯ ಪ್ರಜ್ವಲನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹಾಗೆಯೆ ದಿನ ಹನ್ನೆರಡು ಉರುಳಲು ಹಿರಿಯರು, ಮಹಿಳೆಯರು ಬೊಟ್ಯದ ಗುರಿಕಾರರ ಸಮ್ಮುಖದಲ್ಲಿ ಸೇಡಿ ಮಣ್ಣಿನಿಂದ ಮಂಡಲ ಬರೆದು ನಾಲ್ಕು ಮೂಲೆಗಳನ್ನು ಗುರುತಿಸಿ ಐದನೇ ಕೇಂದ್ರವಾಗಿ ಮಧ್ಯ ಭಾಗವನ್ನು ಗುರುತಿಸಿಕೊಂಡು ಐದು ಬಿಂದಿಗೆ ನೀರನ್ನು ಐದು ಬರಿಯವರು ತಂದಿಟ್ಟು, ಈ ನಡುವೆ ಅಡ್ಡವಾಗಿ ಇರಿಸಲಾದ “ಉಜ್ಜೆರ್” ( ಭತ್ತ ಕುಟ್ಟುವ ಕೋಲು ) ನ ಮೇಲೆ ಪರಿಶುದ್ಧಳಾದ ಬಾಲೆ ಬೊಲ್ಲೆಯನ್ನು ಶೃಂಗರಿಸಿ ಮದುಮಗಳ ಉಡುಗೆ ತೊಡುಗೆ ತೊಡಿಸಿ ಉಜ್ಜೇರ್ ನಲ್ಲಿ ಕುಳ್ಳಿರಿಸಿ ಐದು ಬರಿಯವರು ಐದು ಬಿಂದಿಗೆಯಿಂದ ನೀರು ಸುರಿದು ಬಾಲೆ ಬೊಲ್ಲೆಯನ್ನು ಶುದ್ದೀಕರಣಗೊಳಿಸುವ ಮೂಲಕ ಸಾಂಸ್ಕೃತಿಕ ವಿಧಿ ವಿಧಾನಗಳನ್ನು ಪೂರೈಸಿ ಆಕೆಯ ನೀರ ಮದುವೆ ( ಮದಿಮಲಾಯಿ ಮದಿಮೆ )ಯನ್ನು ದುಡಿ ಪಾಡ್ದನ ಲೇಲೆಲ ಪದರಂಗಿತದೊಂದಿಗೆ ಸಂಭ್ರಮಿಸುತ್ತಾರೆ. ನಂತರ ಅಡುಗೆ ಪಾತ್ರೆಗಳಾದ ಕರ, ಕೈಲ್, ಪಲ್ಲಯಿ, ಗೆದ್ದವು,ಬಾಜನ,ತಡ್ಪೆ, ಮೈಪು ಇತರ ಪ್ರಮುಖ ಸಾಮಾಗ್ರಿಗಳನ್ನು ಸ್ಪರ್ಶಿಸಿ ನಮಸ್ಕರಿಸಿ ಗೌರವ ಸಲ್ಲಿಸುವ “ಕರಪತ್ತವುನ” ಪ್ರಕ್ರಿಯೆಯ ಮೂಲಕ ಹೆಣ್ಮಗಳು ಹೆಂಗಸಾಗುವ ( ಪೊನ್ನುಪೋದು ಪೊಂಜೊವಾಪಿನ ) ಜವಾಬ್ದಾರಿಯ ನಡಿಗೆಯನ್ನು ತೋರಿಸಿ ಕೊಡುತ್ತಾರೆ. ದೇಯಿ ಬೈದೆದಿಯು ಸಂಭ್ರಮದ ಸವಿಯನ್ನು ಸವಿಯುತ್ತಾ ಸಂತಸದ ನಿಟ್ಟುಸಿರು ಬಿಡುತ್ತಾಳೆ.

ಮುಂದಿನ ಸಂಚಿಕೆ: ಬಂಗಾಡಿಯ ಕಪ್ಪದ ಮಾನಿ ಹಂದ್ರನ ಬೇಟಿ )




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಹಿಂದಿನ ಸಂಚಿಕೆ:

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01

ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:

ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03

ಬೊಲ್ಲೆಯ ನಾಮಕರಣ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 04

ಸ್ವಾಭಾವಿಕ ಸ್ವಭಾವ ಬೆಳೆಸಿಕೊಂಡ ಸತ್ಯದಪ್ಪೆ ಬೊಲ್ಲೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 05

ಇತ್ತೀಚಿನ ಸುದ್ದಿ