ಸತ್ತಿದ್ದಾರೆ ಅಂದುಕೊಂಡಿದ್ದ ವೃದ್ಧನಿಂದ ಊಟಕ್ಕಾಗಿ ಕರೆ | ಅಂತ್ಯಸಂಸ್ಕಾರದ ನಂತರ ತಿಳಿಯಿತು ಯಡವಟ್ಟು
ಬೆಳಗಾವಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ವೃದ್ಧ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದು, ಮೃತದೇಹವನ್ನು ತಂದು ಮನೆಯಲ್ಲಿ ಅಂತ್ಯಸಂಸ್ಕಾರ ಕೂಡ ನಡೆಸಲಾಗಿತ್ತು. ಆದರೆ ಅಂತ್ಯಸಂಸ್ಕಾರ ಮುಗಿದು, ಒಂದು ತಾಸಿನಲ್ಲಿ ಮೃತಪಟ್ಟಿದ್ದಾರೆ ಎಂದು ಅಂದುಕೊಂಡಿದ್ದ ವೃದ್ಧ ತನ್ನ ಮನೆಗೆ ಕರೆ ಮಾಡಿ “ಊಟ ಯಾಕೆ ಇನ್ನೂ ತಂದು ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ”
ಈ ಘಟನೆ ನಡೆದಿದ್ದು, ಜಿಲ್ಲೆಯ ಕಾಗವಾಡ ತಾಲೂಕಿ ಮೋಳೆ ಗ್ರಾಮದಲ್ಲಿ. 82 ವರ್ಷ ವಯಸ್ಸಿನ ಪಾಯಪ್ಪ ಸತ್ಯಪ್ಪ ಹಳ್ಳೋಳ್ಳಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಮೋಳೆ ಗ್ರಾಮಕ್ಕೆ ಆಗಮಿಸಿದ ಬೆಳಗಾವಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ಹಾಗೂ ತಹಶೀಲ್ದಾರ್ ಪ್ರಮೀಳಾ ದೇಶ ಪಾಂಡೆ, ಕಾಗವಾಡ ಪಿಐ ಹನುಮಂತ ಧರ್ಮಟ್ಟಿ, ಉಪ ತಹಶೀಲ್ದಾರ್ ಅಣ್ಣಪ್ಪ ಕೋರೆ ಇವರು ಮೃತದೇಹವೊಂದನ್ನು ಪಾಯಪ್ಪ ಅವರ ಮನೆಗೆ ತಂದಿದ್ದಾರೆ.
ಪಾಯಪ್ಪನವರು ಮೃತಪಟ್ಟಿದ್ದಾರೆ ಎಂದು ಅವರ ಮನೆಯಲ್ಲಿ ಕೊವಿಡ್ ನಿಯಮಗಳ ಪ್ರಕಾರ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೃತದೇಹದ ಮುಖವನ್ನು ನೋಡಲು ಸಾಧ್ಯವಾಗಿರಲಿಲ್ಲ.
ಇತ್ತ ಪಾಯಪ್ಪನವರು ಆಸ್ಪತ್ರೆಯಲ್ಲಿದ್ದು, ಊಟದ ಸಮಯವಾದರೂ ಇನ್ನೂ ಯಾಕೆ ಊಟ ತಂದಿಲ್ಲ ಎಂದು ವಿಚಾರಿಸಲು ನರ್ಸ್ ವೊಬ್ಬರ ಮೊಬೈಲ್ ನಿಂದ ಮನೆಗೆ ಕರೆ ಮಾಡಿದ್ದು, ಊಟ ಯಾಕೆ ಇನ್ನೂ ತಂದಿಲ್ಲ ಎಂದು ಕೋಪದಲ್ಲಿ ಕೇಳಿದ್ದಾರೆ. ಪಾಯಪ್ಪನವರು ಇನ್ನೂ ಬದುಕಿದ್ದಾರೆ ಎನ್ನುವ ವಿಚಾರ ಆಗ ಕುಟುಂಬಸ್ಥರಿಗೆ ತಿಳಿದು ಬಂದಿದ್ದು, ಅಧಿಕಾರಿಗಳು ತಪ್ಪಾದ ವಿಳಾಸಕ್ಕೆ ಮೃತದೇಹ ತಂದಿರುವುದು ಬೆಳಕಿಗೆ ಬಂದಿದೆ.