ಸಾವಿಗೂ 15-20 ನಿಮಿಷಗಳವರೆಗೆ ಚೆನ್ನಾಗಿಯೇ ಇದ್ದರಂತೆ ಅಪ್ಪು! | ಘಟನೆಯನ್ನು ವಿವರಿಸಿದ ಡ್ರೈವರ್ ಬಾಬು
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರು ಸಾವಿಗೀಡಾಗುವುದಕ್ಕೂ 15-20 ನಿಮಿಷಗಳವರೆಗೂ ಚೆನ್ನಾಗಿಯೇ ಇದ್ದರು ಎನ್ನುವುದು ಇದೀಗ ತಿಳಿದು ಬಂದಿದೆ. ಪುನೀತ್ ಅವರು ಚಿಕಿತ್ಸೆಗಾಗಿ ಮನೆಯಿಂದ ಸ್ವತಃ ತಾವೇ ನಡೆದುಕೊಂಡು ಹೋಗಿ ಕಾರು ಹತ್ತಿದ್ದಾರೆ.
ಕಾರು ಹತ್ತಿದ ಬಳಿಕವೂ ಲವಲವಿಕೆಯಿಂದ ಇದ್ದರು. ಮನೆಯಲ್ಲಿದ್ದಾಗ ಯಾಕೋ ಆರೋಗ್ಯ ಸರಿಯಿಲ್ಲ ಎಂದೆನಿಸಿತ್ತು ಹೀಗಾಗಿ ಅವರು ಆಸ್ಪತ್ರೆಗೆ ಹೋಗಲು ಮುಂದಾಗಿದ್ದರು. ಮನೆಯಿಂದ ಕೇವಲ 5 ನಿಮಿಷದಲ್ಲಿಯೇ ಆಸ್ಪತ್ರೆಗೆ ತೆರಳಿದ್ದರು ಎನ್ನಲಾಗಿದೆ.
ಪುನೀತ್ ಅವರ ಕಾರು ಚಾಲಕ ಬಾಬು ಘಟನೆಯ ಬಗ್ಗೆ ವಿವರಿಸಿದ್ದಾರೆ. ಅನಾರೋಗ್ಯ ಕಾಣಿಸಿಕೊಂಡ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮನೆಯಿಂದ ಕೇವಲ 5 ನಿಮಿಷದಲ್ಲಿ ಡಾ.ರಮಣರಾವ್ ಅವರ ಕ್ಲಿನಿಕ್ ಗೆ ಹೋಗಿದ್ದೆವು. ಕಾರಿನಲ್ಲಿ ಹೋಗುತ್ತಿರುವ ವೇಳೆ ಚಿತ್ರ ವಿತರಕ ಮಂಜುನಾಥ್ ಜೊತೆಗೆ ಪುನೀತ್ ಅವರು ಫೋನ್ ನಲ್ಲಿ ಮಾತನಾಡುತ್ತಾ ಬಂದಿದ್ದಾರೆ. ರಮಣರಾವ್ ಕ್ಲಿನಿಕ್ ನಿಂದ ಕೇವಲ 10 ನಿಮಿಷದಲ್ಲಿ ವಿಕ್ರಂ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಆದರೆ ಈ ವೇಳೆ ಪುನೀತ್ ಅವರು ಸುಸ್ತಾಗಿದ್ದಾರೆ ಎಂದು ಹೇಳಿದ್ದಾರೆ.
ಸಾವಿಗೂ ಮುನ್ನ 15-20 ನಿಮಿಷಗಳ ವರೆಗೆ ಪುನೀತ್ ರಾಜ್ ಕುಮಾರ್ ಅವರ ಚೆನ್ನಾಗಿಯೇ ಇದ್ದರು. ತಮ್ಮ ಅಣ್ಣ ಶಿವರಾಜ್ ಕುಮಾರ್ ಅವರ ಚಿತ್ರ ಭಜರಂಗಿ 2ಗೆ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತಿದೆ ಎಂಬ ಬಗ್ಗೆ ಅವರು ಫೋನ್ ನಲ್ಲಿ ವಿಚಾರಿಸಿದ್ದರು. ಅಷ್ಟರ ಮಟ್ಟಿಗೆ ಅವರು ಆರೋಗ್ಯವಂತರಾಗಿದ್ದರು. ಆದರೆ ಅವರು ಯಾರು ಕೂಡ ನಿರೀಕ್ಷಿಸದಂತೆ ನಿಧನರಾಗಿರುವುದು ಮಾತ್ರ ಕರ್ನಾಟಕದ ಪ್ರತಿಯೊಬ್ಬರ ಎದೆಯಲ್ಲಿಯೂ ಇನ್ನೂ ಮರೆಯಲಾಗದ ನೋವಾಗಿ ಕಾಡುತ್ತಿದೆ.
ನಟ ಸೃಜನ್ ಲೋಕೇಶ್ ಹೇಳಿದಂತೆ, ಈ ಸಾವು ಅನ್ಯಾಯ! ಎಂದೇ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡುತ್ತಿದೆ. ಆದರೆ, ಯಾರ ಮೇಲೆ ಆಕ್ರೋಶ ವ್ಯಕ್ತಪಡಿಸಬೇಕು ಎನ್ನುವುದು ತಿಳಿಯದಂತಾಗಿದೆ. ಪ್ರಕೃತಿಯ ಆಟದ ಮುಂದೆ ಮನುಷ್ಯ ಮಾತ್ರರು ಏನು ತಾನೆ ಮಾಡಲು ಸಾಧ್ಯ ಎಂಬಂತಹ ಅಸಹಾಯಕತೆ ಅಭಿಮಾನಿಗಳದ್ದಾಗಿದೆ.