ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ : ಮಹಿಳೆಯರು ಶೋಷಿತರಿಗಾಗಿ ಜೀವನ ಮುಡಿಪಾಗಿಟ್ಟ ಮಹಾನಾಯಕಿ - Mahanayaka
3:03 AM Wednesday 11 - December 2024

ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ : ಮಹಿಳೆಯರು ಶೋಷಿತರಿಗಾಗಿ ಜೀವನ ಮುಡಿಪಾಗಿಟ್ಟ ಮಹಾನಾಯಕಿ

03/01/2021

ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯಲ್ಲಿ ಇಂದು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಜನವರಿ  3, 1831ರಂದು ಮಹಾರಾಷ್ಟ್ರ ಸತಾರಾ ಜಿಲ್ಲೆಯ ನೈಗಾಂವ್ ಹಳ್ಳಿಯಲ್ಲಿ ಸಾವಿತ್ರಿಬಾಯಿ ಫುಲೆ ಅವರು ಜನಿಸಿದರು. ಸ್ತ್ರೀವಾದಿ ಹಾಗೂ ಸಾಮಾಜಿಕ ಸುಧಾರಕರಾಗಿರುವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಾಲಿಕಾ ದಿನ ಎಂದು ಆಚರಿಸಲಾಗುತ್ತಿದೆ.

ಸಾವಿತ್ರಿಬಾಯಿ ಫುಲೆ ಅವರು ಸ್ತ್ರೀಯರು ಮತ್ತು ದೀನ ದಲಿತರಿಗೆ ಶಿಕ್ಷಣ ನೀಡುವ ಮೂಲಕ ಅವರ ಜೀವನಕ್ಕೆ ಬೆಳಕು ನೀಡಿದವರಾಗಿದ್ದಾರೆ. ಇಂದು ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ ಎಂದರೆ, ಅದಕ್ಕೆ ಸಾವಿತ್ರಿಬಾಯಿ ಫುಲೆ ಅವರು  ಮಾಡಿದ ಶಿಕ್ಷಣ ಕ್ರಾಂತಿಯೇ ಕಾರಣವಾಗಿದೆ. ಸಾವಿತ್ರಿಬಾ ಫುಲೆ ಅವರನ್ನು ಅವರ 9ನೇ ವರ್ಷದಲ್ಲಿ ಜ್ಯೋತಿಬಾ ಫುಲೆ ಅವರಿಗೆ ವಿವಾಹ ಮಾಡಿಕೊಡಲಾಗುತ್ತದೆ. ಜ್ಯೋತಿಬಾ ಫುಲೆ ಅವರು ಸಾವಿತ್ರಿಬಾ ಫುಲೆ ಅವರಿಗೆ ಶಿಕ್ಷಣ ಕಲಿಸುತ್ತಾರೆ. ಅವರ ಬೆಂಬಲದೊಂದಿಗೆ  1848ರಲ್ಲಿ ಪುಣೆಯ ಭಿಡೆ ವಾಡದಲ್ಲಿ ಮೊದಲ ಬಾಲಕಿಯರ ಶಾಲೆಯಲ್ಲಿ ತೆರೆಯುತ್ತಾರೆ. 1851ರ ಸಮಯದಲ್ಲಿ ಸಾವಿತ್ರಿಬಾ ಫುಲೆ ಅವರು ಮೂರು ಶಾಲೆಗಳನ್ನು ತೆರೆಯುತ್ತಾರೆ. ಈ ಸಂದರ್ಭದಲ್ಲಿ 150 ವಿದ್ಯಾರ್ಥಿಗಳಿಗೆ ಸಾವಿತ್ರಿಬಾಯಿ ಫುಲೆ ಒಬ್ಬರೇ ಶಿಕ್ಷಕಿಯಾಗಿದ್ದರು. ಈ ಸಂದರ್ಭದಲ್ಲಿ ಮೇಲ್ಜಾತಿಯ ಅಥವಾ ಮನೋವಿಕಲರಿಂದ ಸಾಕಷ್ಟು ಅವಮಾನಗಳನ್ನು ಅವರು ಎದುರಿಸುತ್ತಾರೆ. ಆದರೆ ಇದ್ಯಾವುದನ್ನೂ ಅವರು ಗಂಭೀರವಾಗಿ ಪರಿಗಣಿಸದೇ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ.

ದೇಶದಲ್ಲಿ 17 ಶಾಲೆಗಳನ್ನು ಸಾವಿತ್ರಿಬಾ ಫುಲೆ-ಜ್ಯೋತಿಬಾ ಫುಲೆ ದಂಪತಿ ಸ್ಥಾಪಿಸಿದರೂ¸ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಜಾತಿಯ ಮಹಿಳೆಯರೇ ಬರುತ್ತಿರುವುದನ್ನು ಅವರು ಗಮನಿಸಿದರು. ಆ ಬಳಿಕ ಶೋಷಿತರ ಮಹಿಳೆಯರಿಗಾಗಿ ಶಾಲೆಗಳನ್ನು ಸ್ಥಾಪಿಸಿದರು. ಜ್ಯೋತಿಬಾ ಫುಲೆ ಅವರು ಶೋಷಿತರು ಶಾಲೆಗೆ ಬರುವಂತೆ ಪ್ರೋತ್ಸಾಹಿಸಿದರು.

ಮಹಿಳೆಯರ ಶಿಕ್ಷಣ, ಜಾತಿ ವ್ಯವಸ್ಥೆ, ಸಾಮಾಜಿಕ ಅನ್ಯಾಯ, ದೇಶದ ಜನರ ಮೂಲ ಭೂತ ಹಕ್ಕುಗಳಿಗಾಗಿ ಸಾವಿತ್ರಿಬಾ ಫುಲೆ ಅವರು ಹೋರಾಡಿದರು. ಮೇಲ್ಜಾತಿಯ ವಿಕೃತರು ಶೋಷಿತರಿಗೆ ನೀರು ಮುಟ್ಟಲು ಬಿಡದ ಸಂದರ್ಭದಲ್ಲಿ ಅವರು ಅಸ್ಪೃಶ್ಯರಿಗಾಗಿ ಪ್ರತ್ಯೇಕ ಬಾವಿ ತೆರೆದರು. ಗರ್ಭಿಣಿಯರಿಗೆ, ಅತ್ಯಾಚಾರ ಸಂತ್ರಸ್ತೆಯರಿಗಾಗಿ ಆರೈಕೆ ಕೇಂದ್ರವನ್ನು ತೆರೆದರು. ಫ್ಲೇಗ್ ರೋಗ ಭಾರತವನ್ನು ಕಾಡಿದಾಗ 1897ರಲ್ಲಿ ತಮ್ಮ ಪುತ್ರ ಯಶ್ವಂತ್ ಅವರಿಂದ ಕ್ಲಿನಿಕ್ ತೆರೆದು, ಜನರಿಗೆ ಸಹಾಯ ಮಾಡಿದರು. ಸಾವಿತ್ರಿಬಾ ಫುಲೆ ಅವರು ಪ್ಲೇಗ್ ರೋಗಿಗಳ ಸೇವೆ ಮಾಡುತ್ತಲೇ¸ ಅದೇ ರೋಗಕ್ಕೆ ಮಾರ್ಚ್ 10, 1897ರಂದು ಬಲಿಯಾದರು. ಅವರ ನಿಧನಕ್ಕೆ ಮಾರಕ ಪ್ಲೇಗ್ ರೋಗವೇ ಕಾರಣವಾಯಿತು.

ಸಾವಿತ್ರಿಬಾ ಫುಲೆ ಅವರ ಬರಹಗಳು ಬಹಳ ಪ್ರಾಬಲ್ಯ ಹೊಂದಿತ್ತು. ಅವರೊಬ್ಬರು ಉತ್ತಮ ಕವಿಯಾಗಿದ್ದರು. ದೇಶದಲ್ಲಿದ್ದ ಬ್ರಾಹ್ಮಣ ಪ್ರಾಬಲ್ಯವನ್ನು ಮೇಲು ಕೀಳುಗಳನ್ನು ಅವರು ಪ್ರಶ್ನಿಸಿದರು. ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಸಾಮಾಜಿಕ ದುಷ್ಕೃತ್ಯವನ್ನು ಅವರು ಬಹಿರಂಗವಾಗಿ ಟೀಕಿಸಿದರು. ಸತಿ ಪದ್ಧತಿ, ಬಾಲ್ಯವಿವಾಹ, ಲಿಂಗ ಅಸಮಾನತೆಯನ್ನೂ ಸಾವಿತ್ರಿಬಾ ಫುಲೆ ವಿರೋಧಿಸಿದರು. ಆದರೆ ಇಂತಹ ಮಹಾನ್ ತಾಯಿಯ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಆಚರಿಸದೇ, ಈಗಲೂ ಬ್ರಾಹ್ಮಣ್ಯ ಪ್ರಾಬಲ್ಯದ ರಾಜಕೀಯ ವ್ಯಕ್ತಿಗಳು ಸಾವಿತ್ರಿಬಾ ಫುಲೆ ಅವರ ಇತಿಹಾಸವನ್ನು ಮುಚ್ಚಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ