ಸಾಯಬೇಕೋ, ವ್ಯಾಪಾರ ಮಾಡಬೇಕೋ? ತೀರ್ಮಾನಿಸಿ | ಸಣ್ಣಪುಟ್ಟ ವ್ಯಾಪಾರಿಗಳಿಗೆ ಈಶ್ವರಪ್ಪ ಬಿಟ್ಟಿ ಸಲಹೆ! - Mahanayaka
6:14 PM Wednesday 5 - February 2025

ಸಾಯಬೇಕೋ, ವ್ಯಾಪಾರ ಮಾಡಬೇಕೋ? ತೀರ್ಮಾನಿಸಿ | ಸಣ್ಣಪುಟ್ಟ ವ್ಯಾಪಾರಿಗಳಿಗೆ ಈಶ್ವರಪ್ಪ ಬಿಟ್ಟಿ ಸಲಹೆ!

eshwarappa
24/04/2021

ಶಿವಮೊಗ್ಗ: ಸಾಯ ಬೇಕೋ? ವ್ಯಾಪಾರ ಬೇಕೋ ಎಂದು ನೀವೇ ತೀರ್ಮಾನಿಸಿ, ಬದುಕಿದ್ದರೆ ತಾನೆ  ವ್ಯಾಪಾರ ಮಾಡಲು ಆಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದು, ಈ ಮಾತನ್ನು ಅವರು ಯಾವುದೋ ಐಟಿ ಕಂಪೆನಿಗಳ ಉದ್ಯೋಗಿಗಳಿಗೆ ಹೇಳಿರೋದಲ್ಲ, ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುವ ಜನರಿಗೆ ಈ ಮಾತು ಹೇಳಿದ್ದಾರೆ.

ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಗಾಂಧಿ ಬಜಾರ್ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್‌ವರೆಗೆ ಸಚಿವ ಈಶ್ವರಪ್ಪ ಪಾದಯಾತ್ರೆ ನಡೆಸಿದ ಈಶ್ವರಪ್ಪನವರು, ಸಾರ್ವಜನಿಕರಿಗೆ ಮಾಸ್ಕ್ ವಿತರಿಸುತ್ತಾ ತೆರಳಿದ್ದರು. ಈ ನಡುವೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ಅವರು, ವ್ಯಾಪಾರಕ್ಕಿಂತ ಜೀವ ಮುಖ್ಯ, ಬದುಕಿದ್ದರೆ ತಾನೆ ವ್ಯಾಪಾರ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

”ಸಾಯಬೇಕೋ, ವ್ಯಾಪಾರ ಮಾಡಬೇಕೋ ತೀರ್ಮಾನಿಸಲಿ, ಬದುಕಿದ್ದರೆ ತಾನೆ ವ್ಯಾಪಾರ ಮಾಡಲು ಆಗುವುದು. ದೆಹಲಿ, ಬೆಂಗಳೂರು ಮಟ್ಟಕ್ಕೆ ಉಳಿದ ಜಿಲ್ಲೆಗಳು ಹೋಗಬಾರದು ಅನ್ನುವುದು ಸರ್ಕಾರದ ಉದ್ದೇಶವಾಗಿದೆ” ಎಂದು ಈಶ್ವರಪ್ಪ ಹೇಳಿದರು.

ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿರುವ ಕುರಿತು ಕೇಳಿದ ಪ್ರಶ್ನೆಗೆ, ಸ್ವಲ್ಪ ದಿನ ವ್ಯಾಪಾರ ನಿಲ್ಲಿಸಿ. ಮನೆಯವರ ಜೊತೆಗೆ ಸಂತೋಷವಾಗಿ ಇರೋದು ಒಳ್ಳೆಯದು. ಕೋವಿಡ್ ಆಗಿ ಆಸ್ಪತ್ರೆಗೆ ಹೋಗಿ ಸತ್ತರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ.

ಸಚಿವ ಈಶ್ವರಪ್ಪ ಅವರಿಗೇನು ಚೆನ್ನಾಗಿ ಡೈಲಾಗ್ ಹೊಡೆಯುತ್ತಾರೆ. ಈಶ್ವರಪ್ಪನವರಿಗೆ ಉಣ್ಣಲು, ತಿನ್ನಲು ಯಾವುದಕ್ಕೂ ಕೊರತೆ ಇಲ್ಲ. ಎಲ್ಲರೂ ಹಾಗೆಯೇ ಇರುತ್ತಾರೆ ಎನ್ನುವುದು ಈಶ್ವರಪ್ಪನವರ ಭ್ರಮೆ. ಬದುಕು ಎಂದರೆ ಕೇವಲ ಉಣ್ಣುವುದು ತಿನ್ನುವುದು ಮಾತ್ರವಲ್ಲ ಅದನ್ನೂ ಮೀರಿದ ಸವಾಲುಗಳಿರುತ್ತವೆ ಎನ್ನುವುದು ಈಶ್ವರಪ್ಪನವರು ತಿಳಿದುಕೊಳ್ಳಬೇಕು ಎಂದು ಸಾರ್ವಜನಿಕರು ಈ ಹೇಳಿಕೆ ಬೇಸರ ವ್ಯಕ್ತಪಡಿಸಿದ್ದು, ಬಿಟ್ಟಿ ಸಲಹೆ ಕೊಡುವುದರ ಬದಲು, ವ್ಯಾಪಾರಿಗಳಿಗೆ ಆಗುತ್ತಿರುವ ನಷ್ಟವನ್ನು ಸರ್ಕಾರ ಭರಿಸಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ