ಗಮನಿಸಿ: ಎಸ್ ಬಿಐ ಗ್ರಾಹಕರಿಗೆ ಬಹಳ ಮುಖ್ಯ ಮಾಹಿತಿ
ನವದೆಹಲಿ: ಮೂಲ ಉಳಿತಾಯ ಖಾತೆಗಳ ಮೇಲೆ ಕೊಡುವ ಮೌಲ್ಯಾಧರಿತ ಸೇವೆಗಳಿಗೆ ಶುಲ್ಕ ನಿಗದಿಪಡಿಸಿರುವುದಾಗಿ ಘೋಷಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಇದೇ ಜುಲೈ 1ರಿಂದ ಚೆಕ್ ಬುಕ್ ವಿತರಿಸುವುದಾಗಿ ತಿಳಿಸಿದೆ.
ಎಟಿಎಂ ಹಾಗೂ ನಗದು ಹಿಂಪಡೆಯುವ ಶುಲ್ಕಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಇದೇ ವೇಳೆ ತಿಳಿಸಿದೆ ಎಸ್ ಬಿಐ. ಮೊದಲ ನಾಲ್ಕು ವ್ಯವಹಾರಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಅದಕ್ಕಿಂತ ಹೆಚ್ಚಿನ ಬಾರಿ ವ್ಯವಹಾರ ಮಾಡುವ ವೇಳೆ ಪ್ರತಿ ಬಾರಿ ಎಟಿಎಂ ವ್ಯವಹಾರ ಮಾಡಿದಾಗ 15 ರೂ. ಮತ್ತು ಜಿಎಸ್ ಟಿ ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದೆ.
ಪ್ರಧಾನ ಮಂತ್ರಿ ಜನಧನ ಖಾತೆಗಳನ್ನೂ ಒಳಗೊಂಡ ಮೂಲ ಉಳಿತಾಯ ಖಾತೆಗಳಿಗೆ ಇದುವರೆಗೂ ಚೆಕ್ ಪುಸ್ತಕಗಳನ್ನು ಕೊಡುತ್ತಿರಲಿಲ್ಲ. ಇದಕ್ಕೂ ಮುನ್ನ ಚೆಕ್ ಬುಕ್ ಬೇಕಾದ ಮಂದಿ ತಮ್ಮ ಮೂಲ ಉಳಿತಾಯ ಖಾತೆಗಳನ್ನು ಸಾಮಾನ್ಯ ಉಳಿತಾಯ ಖಾತೆಗಳಿಗೆ ಮೇಲ್ದರ್ಜೆಗೇರಿಸಿಕೊಳ್ಳಬೇಕಿತ್ತು. ಇದೀಗ ಮೂಲ ಉಳಿತಾಯ ಖಾತೆದಾರರಿಗೂ ಸಹ 10 ಹಾಳೆಗಳಿರುವ ಚೆಕ್‌ಬುಕ್ ಗಳನ್ನು ಇದೇ ವಿತ್ತೀಯ ವರ್ಷದಲ್ಲೇ ವಿತರಿಸುವುದಾಗಿ ಎಸ್ ಬಿಐ ತಿಳಿಸಿದೆ.