ಎಂ.ಎಂ ಕಲಬುರ್ಗಿ, ಗೌರಿ ಲಂಕೇಶ್, ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್‌ ಹತ್ಯೆಗಳ ನಡುವೆ ಏನಾದ್ರೂ ‘ಸಾಮಾನ್ಯ ಎಳೆ’ ಇದೆಯೇ: ಸಿಬಿಐಗೆ ಸುಪ್ರೀಂಕೋರ್ಟ್ ಪ್ರಶ್ನೆ - Mahanayaka
11:18 PM Saturday 21 - September 2024

ಎಂ.ಎಂ ಕಲಬುರ್ಗಿ, ಗೌರಿ ಲಂಕೇಶ್, ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್‌ ಹತ್ಯೆಗಳ ನಡುವೆ ಏನಾದ್ರೂ ‘ಸಾಮಾನ್ಯ ಎಳೆ’ ಇದೆಯೇ: ಸಿಬಿಐಗೆ ಸುಪ್ರೀಂಕೋರ್ಟ್ ಪ್ರಶ್ನೆ

19/08/2023

ಹಿರಿಯ ಸಾಹಿತಿ ಎಂ.ಎಂ ಕಲಬುರ್ಗಿ, ಲೇಖಕಿ ಗೌರಿ ಲಂಕೇಶ್, ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್‌ ಹತ್ಯೆಗಳ ನಡುವೆ ಏನಾದ್ರೂ ‘ಸಾಮಾನ್ಯ ಎಳೆ’ ಇದೆಯೇ ಎಂದು ಸುಪ್ರೀಂ ಕೋರ್ಟ್‌ ಸಿಬಿಐಗೆ ಪ್ರಶ್ನೆ ಮಾಡಿದೆ.

ನರೇಂದ್ರ ಧಾಬೋಲ್ಕರ್‌ ಹತ್ಯೆ ಪ್ರಕರಣದ ತನಿಖೆಯ ಮೇಲ್ವಿಚಾರಣೆ ಮಾಡಲು ಏಪ್ರಿಲ್‌ 18ರಂದು ಬಾಂಬೆ ಹೈಕೋರ್ಟ್‌ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮುಕ್ತಾ ಧಾಬೋಲ್ಕರ್‌ ಸುಪ್ರೀಂ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಸುಧಾಂಶು ಧುಲಿಯಾ ಅವರನ್ನ ಒಳಗೊಂಡ ಪೀಠವು ಸಿಬಿಐಗೆ ಈ ನಾಲ್ಕು ಹತ್ಯೆಗಳ ಮಧ್ಯೆ ಸಾಮಾನ್ಯ ಸಂಬಂಧ ಇದೆಯೇ ಎಂದು ಪರಿಶೀಲಿಸುವಂತೆ ಸೂಚಿಸಿದೆ.

ಮುಕ್ತಾ ಧಾಬೋಲ್ಕರ್‌ ಪರ ವಾದ ಮಂಡಿಸಿದ ವಕೀಲ ಆನಂದ ಗ್ರೋವರ್‌ ಈ ಹತ್ಯೆಗಳ ಹಿಂದೆ ದೊಡ್ಡ ಪಿತೂರಿ ಇದೆ. ಪುರಾವೆಗಳು ಈ ಹತ್ಯೆಗಳ ಮಧ್ಯೆ ಸಂಬಂಧ ಇದೆ ಎನ್ನುವುದನ್ನು ಸೂಚಿಸುತ್ತಿವೆ ಎಂದು ತಿಳಿಸಿದ್ದರು. ಜೊತೆಗೆ ಸಿಬಿಐ ತನಿಖೆ ಪೂರ್ಣಗೊಳ್ಳುವ ಮೊದಲೇ ಹೈಕೋರ್ಟ್‌ ಈ ಆದೇಶ ಹೊರಡಿಸಿದೆ ಎಂದರು. ಆಗ ನ್ಯಾಯಪೀಠವು ‘ಹಲವಾರು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿರುವುದರಿಂದ ಮೇಲ್ವಿಚಾರಣೆಗೆ ಹೈಕೋರ್ಟ್‌ ನಿರಾಕರಿಸಿದೆ’ ಎಂದು ಹೇಳಿದೆ. ಇದಕ್ಕೆ ಪ್ರತಿಯಾಗಿ ಇಂತಹ ಮೇಲ್ವಿಚಾರಣೆಯಲ್ಲಿ ತಪ್ಪೇನು..? ಇಲ್ಲಿವರೆಗೆ ಪರಾರಿಯಾಗಿರುವವರನ್ನು ಬಂಧಿಸಿಲ್ಲ ಎಂದು ವಾದ ಮಂಡಿಸಿದರು.


Provided by

ಸಿಬಿಐ ಪರವಾಗಿ ಹಾಜಾರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಅವರನ್ನು ಪ್ರಶ್ನಿಸಿದ ನ್ಯಾಯಪೀಠವು ಅವರು ಈಗ ಆರೋಪಿಗಳು ವಿಚಾರಣೆ ಎದುರಿಸುತ್ತಿದ್ದಾರೆ (ಧಾಬೋಲ್ಕರ್‌ ಪ್ರಕರಣ). ನಿಮ್ಮ ಪ್ರಕಾರ ಈ ನಾಲ್ಕು ಹತ್ಯೆಗಳ ಮಧ್ಯೆ ಯಾವುದೇ ಸಾಮಾನ್ಯ ಎಳೆ ಇಲ್ಲವೇ..? ಎಂದು ಪ್ರಶ್ನಿಸಿದರು. ಜೊತೆಗೆ ಈ ಬಗ್ಗೆ ನ್ಯಾಯಾಲಯವು ತಿಳಿಯಲು ಬಯಸುತ್ತಿದೆ. ಕೂಡಲೇ ಪರಿಶೀಲನೆ ನಡೆಸಿ ಎಂದು ನ್ಯಾಯಮೂರ್ತಿ ಕೌಲ್‌ ಯಶ್ವರ್ಯಾ ಭಾಟಿ ಅವರಿಗೆ ಸೂಚಿಸಿದೆ. ಜೊತೆಗೆ ವಕೀಲ ಗ್ರೋವರ್‌ ಅವರಿಗೆ ಈ ವಿಷಯದಲ್ಲಿ ಹೆಚ್ಚುವರಿ ದಾಖಲೆ ಒದಗಿಸಲು ಎರಡು ವಾರಗಳ ಕಾಲಾವಕಾಶವನ್ನೂ ನೀಡಿತ್ತು.

ಮೂಢನಂಬಿಕೆಗಳ ವಿರುದ್ಧ ಹೋರಾಡಿದ್ದ ಧಾಬೋಲ್ಕರ್‌ ಅವರನ್ನು 2013ರ ಆಗಸ್ಟ್‌ 20 ರಂದು ಪುಣೆಯಲ್ಲಿ ವಾಕಿಂಗ್‌ ವೇಳೆ ಹತ್ಯೆ ಮಾಡಲಾಗಿತ್ತು. 2015ರ ಫೆಬ್ರವರಿ 20ರಂದು ಪನ್ಸಾರೆ ಅವರನ್ನು ಮತ್ತು 2015ರ ಆಗಸ್ಟ್‌ 30ರಂದು ಎಂ ಎಂ ಕಲಬುರ್ಗಿ ಅವರನ್ನು ಕೊಲ್ಲಲಾಗಿತ್ತು. 2017 ಸೆಪ್ಟೆಂಬರ್‌ 5ರಂದು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇತ್ತೀಚಿನ ಸುದ್ದಿ