ಯುಪಿಯ ಅಂಗಡಿಗಳಲ್ಲಿ ಹೆಸರು ಪ್ರದರ್ಶನ ವಿಚಾರ: ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ
ಉತ್ತರ ಪ್ರದೇಶದ ಕಾವಡ್ ಯಾತ್ರೆಯ ಮಾರ್ಗದುದ್ದಕ್ಕೂ ಅಂಗಡಿಗಳ ಮಾಲೀಕರ ಮತ್ತು ನೌಕರರ ಹೆಸರನ್ನು ಪ್ರದರ್ಶಿಸಲು ಸೂಚಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಮಾಲೀಕರು ತಮ್ಮ ಅಂಗಡಿಯಲ್ಲಿ ಯಾವ ರೀತಿಯ ಆಹಾರ ಲಭ್ಯವಿದೆ ಎಂಬುವುದನ್ನು ಮಾತ್ರ ಪ್ರದರ್ಶಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿದ್ದು ‘ನಾಮಫಲಕ ಆದೇಶ’ ಹೊರಡಿಸಿದ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದು, “ಯಾವುದೇ ಕಾನೂನಿನ ಅಧಿಕಾರವಿಲ್ಲದೆ ಆದೇಶ ಹೊರಡಿಸಲಾಗಿದೆ” ಎಂದು ಹೇಳಿದ್ದು, ನಾಮಫಲಕ ಪ್ರದರ್ಶಿಸುವ ಆದೇಶವನ್ನು ‘ಕಣ್ಣಿಗೆ ಮಣ್ಣೆರಚುವ’ ಆದೇಶ ಎಂದು ಕರೆದಿದ್ದಾರೆ.
“ಇದು ಕಾವಡ್ ಯಾತ್ರೆ ನೆಪದಲ್ಲಿ ಕಣ್ಣಿಗೆ ಮಣ್ಣೆರಚುವ ಆದೇಶವಾಗಿದೆ. ಯಾವ ಅಂಗಡಿ ಮಾಲೀಕರು ತಮ್ಮ ಮತ್ತು ತಮ್ಮ ನೌಕರರ ಹೆಸರನ್ನು ಪ್ರದರ್ಶಿಸುವುದಿಲ್ಲವೊ ಅವರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.
“ಜನರು ಹೋಟೆಲ್‌ಗಳಲ್ಲಿರುವ ಮೆನುವನ್ನು ನೋಡಿಕೊಂಡು ಆ ಹೋಟೆಲ್, ರೆಸ್ಟೋರೆಂಟ್‌ಗೆ ಭೇಟಿ ನೀಡುತ್ತಾರೆಯೇ ಹೊರತು ಅಲ್ಲಿ ಯಾರೆಲ್ಲ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನೋಡಿಕೊಂಡು ಅಲ್ಲ. ಜನರ ಗುರುತನ್ನು ಬಹಿರಂಗಪಡಿಸುವುದೇ ಈ ಆದೇಶದ ಹಿಂದಿರುವ ಉದ್ದೇಶ ಇದು ನಾವು ಸಂವಿಧಾನದಲ್ಲಿ ಕಲ್ಪಿಸಿದ ಗಣರಾಜ್ಯವಲ್ಲ” ಎಂದು ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth