ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಕಸಿ: ಯಶಸ್ವಿ ಪ್ರಯೋಗ ಎಂದ ನ್ಯೂಯಾರ್ಕ್ ವೈದ್ಯರು

ನ್ಯೂಯಾರ್ಕ್ ನಲ್ಲಿ ಮನುಷ್ಯನ ದೇಹದಲ್ಲಿ ಹಂದಿಯ ಕಿಡ್ನಿ ಕಸಿ ಮಾಡಿ ಪ್ರಯೋಗ ಮಾಡಲಾಗಿದೆ. ಅಮೆರಿಕಾದ ನ್ಯೂಯಾರ್ಕ್ ನಗರದ ಲಾಂಗೋನ್ ಟ್ರಾನ್ಸ್‌ಪ್ಯ್ಲಾಂಟ್ ಇನ್‌ಸ್ಟಿಟ್ಯೂಟ್ ವೈದ್ಯರ ತಂಡವು ಮೆದುಳು ನಿಷ್ಕ್ರಿಯಗೊಡಿದ್ದ ವ್ಯಕ್ತಿಗೆ ಹಂದಿಯ ಕಿಡ್ನಿ ಕಸಿ ಮಾಡಿ ಪ್ರಯೋಗ ನಡೆಸಿದ್ದು ಒಂದು ತಿಂಗಳಿಗೂ ಅಧಿಕ ಕಾಲ ಕಿಡ್ನಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಇದೊಂದು ಯಶಸ್ವಿ ಪ್ರಯೋಗ ಎಂದು ವೈದ್ಯರು ಸಂತಸಪಟ್ಟಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಪ್ರಯೋಗ ವರದಾನವಾಗಲಿದೆ.
ಈ ಹಿಂದೆ ಕೂಡ ನ್ಯೂಯಾರ್ಕ್ ಮತ್ತು ಅಲಬಾಮಾ ವಿಶ್ವವಿದ್ಯಾಯಗಳು ಪ್ರಾಣಿಗಳ ಕಿಡ್ನಿ ಮನುಷ್ಯನಿಗೆ ಕಸಿ ಮಾಡುವ ಪ್ರಯೋಗ ನಡೆಸಿದ್ದರಾದರೂ ಸಫಲವಾಗಿರಲಿಲ್ಲ. ಆದರೆ ಈ ಬಾರಿ ನಡೆಸಿದ ಪ್ರಯೋಗ ಯಶಸ್ವಿಯಾಗಿದ್ದು, ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಅಮೆರಿಕಾದಲ್ಲಿ 88 ಸಾವಿರ ಜನರಿಗೆ ಮೂತ್ರಪಿಂಡ ಕಸಿ ಮಾಡುವ ಅವಶ್ಯಕತೆ ಇದೆ. ಪ್ರತಿವರ್ಷ ಇದೇ ಕಾರಣಕ್ಕೆ ಸಾವುಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಈ ಪ್ರಯೋಗವನ್ನು ಜೀವಂತ ವ್ಯಕ್ತಿಯ ಮೇಲೂ ನಡೆಸಿ ಪರೀಕ್ಷಿಸುವ ಬಗ್ಗೆ ವೈದ್ಯರು ಚಿಂತನೆ ನಡೆಸಿದ್ದಾರೆ.