SDPI ಪಕ್ಷದ ಕಛೇರಿಗಳಿಗೆ ಸೀಲ್ ಹಾಕಿರುವುದು ಅಸಾಂವಿಧಾನಿಕ, ಕೂಡಲೇ ತೆರವುಗೊಳಿಸಲು ಎಸ್ ಡಿಪಿಐ ಆಗ್ರಹ
ಉಡುಪಿ: ಜಿಲ್ಲಾದ್ಯಂತ ನಿನ್ನೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಾರ್ಯ ನಿರ್ವಹಿಸುತ್ತಿರುವ ಕಛೇರಿಗಳಿಗೆ ಮತ್ತು ಮುಖಂಡರ ಮನೆಗಳಿಗೆ ಪೊಲೀಸ್ ಅಧಿಕಾರಿಗಳು ಪಕ್ಷದ ನಾಯಕರಿಗೆ ಮಾಹಿತಿ ನೀಡದೆ ಮಹಜರು ನಡೆಸಿ ಬೀಗ ಜಡಿದು ಸೀಲ್ ಹಾಕಲಾದ ಘಟನೆ ಖಂಡನೀಯ ಎಂದು ಎಸ್ ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ B.N.ಶಾಹಿದ್ ಅಲಿ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು SDPI ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿ ದೇಶಾದ್ಯಂತ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿರುವ ಒಂದು ರಾಜಕೀಯ ಪಕ್ಷವಾಗಿದೆ. ದೇಶದ ಹಲವಾರು ರಾಜ್ಯಗಳಲ್ಲಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಬಹಳಷ್ಟು ಚುನಾಯಿತ ಜನ ಪ್ರತಿನಿಧಿಗಳು ಪಕ್ಷದಿಂದ ಆಯ್ಕೆಯಾಗಿರುತ್ತಾರೆ .
ನಮ್ಮ ಜಿಲ್ಲೆಯಲ್ಲೂ 25ಕ್ಕೂ ಹೆಚ್ಚು ಜನ ಪ್ರತಿನಿಧಿಗಳು SDPI ಪಕ್ಷದಿಂದ ಆಯ್ಕೆಯಾಗಿದ್ದಾರೆ. ಆದ್ದರಿಂದ ನಮ್ಮ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಕಛೇರಿಯು ಅತ್ಯಗತ್ಯವಾಗಿದೆ. ಕೇಂದ್ರ ಸರಕಾರವು PFI ಸಂಘಟನೆಗೆ ನಿಷೇಧ ಹೇರಿದೆಯೆ ಹೊರತು ಎಸ್ ಡಿಪಿಐಗೆ ಅಲ್ಲ ಎಂಬ ಮಾಹಿತಿ ಇದ್ದರೂ, ನಿಷೇಧ ಹೆಸರಿನಲ್ಲಿ ಹಲವು ಕಡೆಗಳಲ್ಲಿ ಅಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿ SDPI ಕಛೇರಿ ಮತ್ತು ಸೇವಾಕೇಂದ್ರಗಳಿಗೆ ಬೀಗ ಜಡಿದಿರುವುದು ಬೇಜಾವ್ದಾರಿಯುತ ವರ್ತನೆಯಾಗಿದೆ. ಇದರ ವಿರುದ್ಧ ಪಕ್ಷವು ಕಾನೂನು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲೆಯ ಚುನಾವಣಾಧಿಕಾರಿ ಜಿಲ್ಲಾಧಿಕಾರಿಯವರು ಪಕ್ಷದ ಕಚೇರಿಯನ್ನು ಹೇಗೆ ಸೀಲ್ ಮಾಡಿದ್ದೀರಿ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಅದೇ ರೀತಿ ಬೀಗ ಜಡಿದು ಸೀಲ್ ಮಾಡಲಾದ ಪಕ್ಷದ ಕಛೇರಿ ಮತ್ತು ಸೇವಾಕೇಂದ್ರಗಳನ್ನು ತೆರವು ಮಾಡಬೇಕು ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka