5 ದಿನಗಳಲ್ಲಿ ಮಲೆ ಮಹದೇಶ್ವರನ ದರ್ಶನಕ್ಕೆ ಜನ ಸಾಗರ: ಹರಿದು ಬಂದ ಆದಾಯ ಎಷ್ಟು ಗೊತ್ತಾ?
ಚಾಮರಾಜನಗರ: ಕರ್ನಾಟಕ ಅಷ್ಟೇ ಅಲ್ಲದೇ ದಕ್ಷಿಣ ಭಾರತದ ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರೆಗೆ ಭಕ್ತಸಾಗರವೇ ಹರಿದು ಬಂದಿದ್ದು ಪ್ರಾಧಿಕಾರಕ್ಕೆ ಭರ್ಜರಿ ಆದಾಯವೂ ಬಂದಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ 17 ರಿಂದ 21 ರವರೆಗೆ ಮಹಾಶಿವರಾತ್ರಿ ನಡೆದಿದ್ದು ಬರೋಬ್ಬರಿ 12 ಲಕ್ಷ ಮಂದಿ ಈ ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ದೇಗುಲಕ್ಕೆ ಆಗಮಿಸಿದ ಭಕ್ತರು ವಿವಿಧ ಉತ್ಸವಗಳು, ಲಾಡು ಪ್ರಸಾದ, ಹಾಗೂ ಇನ್ನಿತರ ಸೇವೆಗಳನ್ನು ನಡೆಸಿದ್ದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ 2.70 ಕೋಟಿ ರೂ. ಆದಾಯ ಕೇವಲ 5 ದಿನದಲ್ಲೇ ಹರಿದುಬಂದಿದೆ.
ಉತ್ತರದಿಂದ ದಕ್ಷಿಣದ ತುತ್ತತುದಿಯಲ್ಲಿ ನೆಲವೂರಿ ಕುಳಿತಿರುವ ಆರಾಧ್ಯ ದೈವ ಮಾದೇಶ್ವರನ ದರ್ಶನವನ್ನು ಪಡೆಯಲು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಈ ಬಾರಿ ಅದು 12 ಲಕ್ಷ ದಾಟಿದೆ.
ಕಾವೇರಿ ನದಿಯಲ್ಲಿ ಜನಪ್ರವಾಹ:
ಮಾದಪ್ಪನ ಬೆಟ್ಟಕ್ಕೆ ಬೆಂಗಳೂರು, ರಾಮನಗರ, ಮಂಡ್ಯ, ಕನಕಪುರದ ಜನರು ಕಾವೇರಿ ಸಂಗಮದಲ್ಲಿ ನದಿ ದಾಟಿ ಈ ಬಾರಿ ಲಕ್ಷಾಂತರ ಮಂದಿ ಪಾದಯಾತ್ರೆ ಮೂಲಕ ಬಂದು ಮಲೆ ಮಹದೇಶ್ವರನ ಶಿವರಾತ್ರಿ ಜಾತ್ರೆ ಕಣ್ತುಂಬಿಕೊಂಡಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಜಾತ್ರೆಗಾಗಿ ಸಾರಿಗೆ ಸಂಸ್ಥೆಯ 5 ದಿನಗಳ ಕಾಲ ನಿರಂತರ 500 ಬಸ್ ಸೇವೆಯನ್ನು ಒದಗಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನಿರಂತರ ಭಕ್ತರ ಹರಿವು ಈ ಬಾರಿ ಕಂಡುಬಂದಿದೆ.
ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ನೆರೆಯ ತಮಿಳುನಾಡಿನಿಂದಲೂ ಶ್ರೀ ಕ್ಷೇತ್ರದಲ್ಲಿ ನೆಲಸಿರುವ ಮಾದೇಶ್ವರ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸಿ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟೋಪತ್ಸವ ಸೇರಿದಂತೆ ಇತರೆ ಸೇವಗಳಲ್ಲಿ ಪಾಲ್ಗೊಂಡಿರುವುದರಿಂದಲೇ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹವಾಗಿದೆ.
ಯಾವ ಉತ್ಸವದಿಂದ ಎಷ್ಟು ಆದಾಯ:
ಜಾತ್ರಾ ಮಹೋತ್ಸವದಲ್ಲಿ ಚಿನ್ನದ ರಥ ಮತ್ತು ಉತ್ಸವಗಳಿಂದ 88,21, 257 ರೂ. ವಿವಿಧ ಸೇವೆಗಳಿಂದ 6, 71,700 ರೂ., ಮಿಶ್ರ ಪ್ರಸಾದದಿಂದ 11,56,250 ರೂ., ಮಾಹಿತಿ ಕೇಂದ್ರದಿಂದ 6,16,250 ರೂ., ಪುದುವಟ್ಟು ಸೇವೆ 1,45,072 ರೂ., ವಿಶೇಷ ಪ್ರವೇಶ ಶುಲ್ಕದಿಂದ 55,38,000, ಲಾಡು ಮಾರಾಟದಿಂದ 92,59,975 ರೂ. ಕಲ್ಲು ಸಕ್ಕರೆಯಿಂದ 1,08,420 ರೂ., ತೀರ್ಥ ಪ್ರಸಾದಿಂದ 2,24,020 ರೂ., ದೇವರ ಪ್ರಸಾದ ಬ್ಯಾಗ್ ನಿಂದ 1,49,670 ರೂ., ಅಕ್ಕಿ ಸೇವೆಯಿಂದ 2,64,450 ರೂ., ಹಾಗೂ ಇತರ ಸೇವೆಗಳಿಂದ 1,17,574 ರೂ. ಸೇರಿದಂತೆ ಒಟ್ಟು 2,70,72,638 ರೂ. ಆದಾಯ ಸಂಗ್ರಹವಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿಣಿ ಮಾಹಿತಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw