ಸೆಲ್ಫಿ ತೆಗೆಯಲು ಗೂಡ್ಸ್ ರೈಲು ಹತ್ತಿದ್ದ ಬಾಲಕನ ಮೇಲೆ ಪ್ರವಹಿಸಿತು 25 ಸಾವಿರ ವೋಲ್ಟ್ ನ ವಿದ್ಯುತ್ ತಂತಿ!
15/04/2021
ಮಂಗಳೂರು: ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಬಾಲಕನ ಮೇಲೆ ಹೈವೋಲ್ಟೇಜ್ ಪ್ರವಹಿಸಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಗೂಡ್ಸ್ ರೈಲು(ಎಲ್ ಪಿಜಿ ಟ್ಯಾಂಕರ್) ಇಲ್ಲಿನ ಕೆಂಜಾರು ತೋಕೂರಿನಲ್ಲಿ ನಿಂತಿದ್ದ ವೇಳೆ ಸ್ನೇಹಿತರ ಜೊತೆಗೆ ಆಟವಾಡಲು ತೆರಳಿದ್ದ ಜೋಕಟ್ಟೆ ಎಚ್ ಪಿಸಿಎಲ್ ಕಾಲನಿ ನಿವಾಸಿ 15 ವರ್ಷ ವಯಸ್ಸಿನ ಮಹಮ್ಮದ್ ದಿಶಾನ್ ರೈಲಿನ ಮೇಲೆ ಸೆಲ್ಫಿತೆಗೆಯಲು ಹತ್ತಿದ್ದಾನೆ.
ರೈಲಿನ ಮೇಲೆಯೇ 25 ಸಾವಿರ ವೋಲ್ಟ್ ನ ವಿದ್ಯುತ್ ತಂತಿ ಇದ್ದು, ಇದನ್ನು ಬಾಲಕ ಗಮನಿಸಿರಲಿಲ್ಲ ಎನ್ನಲಾಗಿದೆ. ಬಾಲಕನ ದೇಹಕ್ಕೆ ಸ್ವಲ್ಪವೇ ವಿದ್ಯುತ್ ತಂತಿ ಸೋಕಿದ್ದು, ಬಾಲಕನಿಗೆ ಶೇ.50ರಷ್ಟು ಸುಟ್ಟಗಾಯವಾಗಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದಾಗ ಜೊತೆಗಿ ಇತರ ಬಾಲಕರು ಬೊಬ್ಬೆ ಹಾಕಿದ್ದು, ತಕ್ಷಣವೇ ಸ್ಥಳೀಯರು ಆಗಮಿಸಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.