ಒಂದೇ ಕುಟುಂಬದ ಏಳು ಮಂದಿ ಶವವಾಗಿ ಪತ್ತೆ: ಗುಜರಾತ್ ನಲ್ಲಿ ಬೆಚ್ಚಿಬೀಳಿಸಿದ ಭಯಾನಕ ಘಟನೆ..!

ಮನೆಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಜನ ಶವವಾಗಿ ಪತ್ತೆಯಾದ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಅಡಾಜನ್ ಪ್ರದೇಶದ ಅಪಾರ್ಟ್ ಮೆಂಟ್ ನಲ್ಲಿ ಏಳು ಮಂದಿಯ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಈ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಆರ್ಥಿಕ ಸಂಕಷ್ಟದಿಂದ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಕಾರಿ ಪದಾರ್ಥ ಸೇವಿಸಿ ಆರು ಮಂದಿ ಸಾವನ್ನಪ್ಪಿದ್ದು, ಒಬ್ಬರು ಮಾತ್ರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಮನೀಶ್ ಸೋಲಂಕಿ(37) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಮೂವರು ಮಕ್ಕಳು ಸೇರಿದಂತೆ ಅವರ ಕುಟುಂಬದ ಇತರ ಆರು ಸದಸ್ಯರ ಶವಗಳು ಮನೆಯ ಹಾಸಿಗೆ ಮತ್ತು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.
‘ ಓರ್ವ ವ್ಯಕ್ತಿ, ಆತನ ಹೆಂಡತಿ ಮತ್ತು ಆತನ ಹೆತ್ತವರು, ಆರು ವರ್ಷದ ಮಗ ಹಾಗೂ 10 ಮತ್ತು 13 ವರ್ಷದ ಇಬ್ಬರು ಹೆಣ್ಣುಮಕ್ಕಳು ಸೂರತ್‌ನ ಸಿದ್ಧೇಶ್ವರ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ” ಎಂದು ಡಿಸಿಪಿ(ವಲಯ -5) ಆರ್ ಪಿ ಬರೋಟ್ ಅವರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.