ಪೋಷಕರಿಗೆ ಬಿಗ್ ಶಾಕ್: ಶಾಲಾ ಶುಲ್ಕ ಪಾವತಿಸಲು ಸಿದ್ಧರಾಗಿ!
ಬೆಂಗಳೂರು: ಲಾಕ್ ಡೌನ್ ಮಾದರಿಯ ಕಠಿಣ ಕ್ರಮವನ್ನು ಸರ್ಕಾರ ಜಾರಿಗೊಳಿಸಿರುವ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ ಇದೀಗ ವಿದ್ಯಾರ್ಥಿಗಳ ಪೋಷಕರಿಗೆ ಸಂಕಷ್ಟ ತಂದೊಡ್ಡಿದೆ.
ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬೋಧನಾ ಶುಲ್ಕ ಪಡೆಯಲು ಅನುಮತಿ ನೀಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬೋಧನಾ ಶುಲ್ಕ ಪಡೆಯಲು ಅನುಮತಿ ನೀಡಲಾಗಿದ್ದು, 2019-20 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಡೆದ ಶೇ.70 ರಷ್ಟು ಬೋಧನಾ ಶುಲ್ಕ ಪಡೆಯಲು ಸರ್ಕಾರ ಅನುಮತಿ ನೀಡಿದೆ.
ವಿದ್ಯಾರ್ಥಿಗಳ ಬೋಧನಾ ಶುಲ್ಕ ಪಡೆಯಲು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದ್ದು, ಶಾಲಾ ಅಭಿವೃದ್ಧಿ ಶುಲ್ಕ,ಐಚ್ಛಿಕ ಶುಲ್ಕ ಸೇರಿದಂತೆ ಉಳಿದ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಒಂದೆಡೆ ಶಾಲೆಗಳು ನಡೆಯುತ್ತಿಲ್ಲ. ಇನ್ನೊಂದೆಡೆ ಶಾಲೆಯೇ ನಡೆಯದೇ ಪೋಷಕರಿಂದ ಶಾಲೆಗಳು ಶುಲ್ಕ ವಸೂಲಿ ಮಾಡುತ್ತಿವೆ. ಇದೊಂದು ಹಗಲು ದರೋಡೆಯಾಗಿದೆ. ಸರ್ಕಾರ ಶಾಲೆ ಆರಂಭಿಸಲು ಅವಕಾಶ ನೀಡಿದ ಬಳಿಕ ಶುಲ್ಕ ವಸೂಲಿಗೆ ಅವಕಾಶ ನೀಡಬೇಕಿತ್ತು. ಮತ್ತೊಂದು ಹಂತದ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡಿರುವ ಜನರ ಪರಿಸ್ಥಿತಿ ಏನು ಎನ್ನುವ ಆತಂಕದ ಮಾತುಗಳು ಸದ್ಯ ಕೇಳಿ ಬಂದಿದೆ.