ಶಂಕಿತ ಆರೋಗ್ಯ ಕಾರ್ಯಕರ್ತ ನೀಡಿದ ಮಾತ್ರೆ ಸೇವಿಸಿ ಮಹಿಳೆ ಸಾವು | ಮೂವರು ಅಸ್ವಸ್ಥ - Mahanayaka
10:47 PM Wednesday 5 - February 2025

ಶಂಕಿತ ಆರೋಗ್ಯ ಕಾರ್ಯಕರ್ತ ನೀಡಿದ ಮಾತ್ರೆ ಸೇವಿಸಿ ಮಹಿಳೆ ಸಾವು | ಮೂವರು ಅಸ್ವಸ್ಥ

erode tamilnadu
27/06/2021

ಈರೋಡ್: ಆರೋಗ್ಯ ಕಾರ್ಯಕರ್ತನೆನ್ನಲಾಗಿದ್ದ ವ್ಯಕ್ತಿ ನೀಡಿದ ಮಾತ್ರೆಗಳನ್ನು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟು, ಅವರ ಪತಿ ಹಾಗೂ ಮತ್ತಿಬ್ಬರು ಅಸ್ವಸ್ಥರಾಗಿರುವ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದಿದೆ.

ಈರೋಡ್ ಜಿಲ್ಲೆಯ ಕರುಗೌಂದನ್ ವಲಸು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ರೈತ ಕರುಪಣ್ಣನ್ ಅವರ ಮನೆಗೆ ಶನಿವಾರ ಬೆಳಗ್ಗೆ ವ್ಯಕ್ತಿಯೊಬ್ಬ ಭೇಟಿ ನೀಡಿದ್ದು,  ಕೊವಿಡ್ ಲಕ್ಷಣಗಳಿಂದ ಬಳಲುತ್ತಿರುವವರನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಯಿಂದ ಬಂದಿರುವುದಾಗಿ ತಿಳಿಸಿದ್ದಾನೆ.

ಕುಟುಂಬದಲ್ಲಿ ಯಾರಿಗಾದರೂ ಕೆಮ್ಮು, ಜ್ವರ ಇದೆಯೇ ಎಂದು ಕೇಳಿದ ಆತ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಈ ಮಾತ್ರೆ ಸೇವಿಸಿ ಎಂದು ಕೆಲವು ಮಾತ್ರೆಗಳನ್ನು ನೀಡಿ ಶಂಕಿತ ಆರೋಗ್ಯ ಕಾರ್ಯಕರ್ತ ತೆರಳಿದ್ದಾನೆ.

ಆ ವ್ಯಕ್ತಿ ತೆರಳಿದ ಬಳಿಕ ಕುಟುಂಬಸ್ಥರು ಆತ ನೀಡಿದ ಮಾತ್ರೆಗಳನ್ನು ಸೇವಿಸಿದ್ದಾರೆ. ಮಾತ್ರೆ ಸೇವಿಸಿ ಕೆಲವೇ ಹೊತ್ತಿನಲ್ಲಿ ಕರುಪ್ಪಣನ್ ಅವರ ಪತ್ನಿ ಸಾವಿಗೀಡಾಗಿದ್ದು, ಇತರ ಮೂವರು ಪ್ರಜ್ಞಾಹೀನರಾಗಿ ಕುಸಿದು ಬಿದ್ದಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ತಕ್ಷಣವೇ  ಅಸ್ವಸ್ಥರನ್ನು ಕೊಯಮತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಂಕಿತ ಆರೋಗ್ಯ ಕಾರ್ಯಕರ್ತನನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಇದರ ಜೊತೆಗೆ ಈತ ಇದೇ ಮಾತ್ರೆಗಳನ್ನು ಇನ್ನೂ ಎಷ್ಟು ಪ್ರದೇಶಗಳಲ್ಲಿ ನೀಡಿದ್ದಾನೆ ಎನ್ನುವ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ