ನಾಂದೇಡ್ ಆಸ್ಪತ್ರೆಯಲ್ಲಿ 24 ಜನರ ಸಾವು: ಏಕನಾಥ್ ಶಿಂಧೆ ಸರ್ಕಾರದ ವಿರುದ್ಧ ಶರದ್ ಪವಾರ್ ವಾಗ್ದಾಳಿ

24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿದಂತೆ 24 ಜನರು ಸಾವನ್ನಪ್ಪಿದ ಬಗ್ಗೆ ಏಕನಾಥ್ ಶಿಂಧೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್, ಈ ಘಟನೆಯು ಸರ್ಕಾರಿ ವ್ಯವಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ನಾಂದೇಡ್ ನ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿದಂತೆ 24 ಜನರು ಸಾವನ್ನಪ್ಪಿದ ದುರದೃಷ್ಟಕರ ಘಟನೆ ಅಕ್ಷರಶಃ ಆಘಾತಕಾರಿಯಾಗಿದೆ ಎಂದು ಶರದ್ ಪವಾರ್ ಟ್ವೀಟ್ ಮಾಡಿದ್ದಾರೆ. ಔಷಧಿಗಳ ಕೊರತೆಯಿಂದಾಗಿ ಇಲ್ಲಿನ ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ವರದಿಯಾಗಿದೆ.
ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ನ ಕಲ್ವಾ ಆಸ್ಪತ್ರೆಯಲ್ಲಿ 18 ಜನರು ಸಾವನ್ನಪ್ಪಿದ ಇದೇ ರೀತಿಯ ಘಟನೆಯನ್ನು ನೆನಪಿಸಿಕೊಂಡ ಪವಾರ್, “ಕೇವಲ ಎರಡು ತಿಂಗಳ ಹಿಂದೆ, ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ನ ಕಲ್ವಾ ಆಸ್ಪತ್ರೆಯಲ್ಲಿ ಒಂದೇ ರಾತ್ರಿಯಲ್ಲಿ 18 ಜನರು ಸಾವನ್ನಪ್ಪಿದ ದುರದೃಷ್ಟಕರ ಘಟನೆ ನಡೆಯಿತು. ಆದರೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದ ಕಾರಣ, ನಾಂದೇಡ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಗಂಭೀರ ಘಟನೆ ಪುನರಾವರ್ತನೆಯಾಗಿದೆ. ಇದು ಸರ್ಕಾರಿ ವ್ಯವಸ್ಥೆಗಳ ವೈಫಲ್ಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಈ ಘಟನೆಯ ಗಂಭೀರತೆಯನ್ನು ಪರಿಹರಿಸಲು ಸರ್ಕಾರ ವಿಫಲವಾದ ಕಾರಣ ನಾಂದೇಡ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ರೀತಿಯ ದುರಂತಕ್ಕೆ ಕಾರಣವಾಯಿತು ಎಂದು ಪವಾರ್ ಹೇಳಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ತಕ್ಷಣ ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪವಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಮುಗ್ಧ ರೋಗಿಗಳ ಜೀವವನ್ನು ಉಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.