ಶಾಸಕರ ಅಮಾನತಿಗೆ ಮಾಯಾವತಿ ನೀಡಿದ ಸ್ಪಷ್ಟನೆ ಏನು ಗೊತ್ತಾ?
ಲಖನೌ: ಪಕ್ಷದಿಂದ ಅಮಾನತುಗೊಂಡ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ)ಯ ಐವರು ಶಾಸಕರು ಸಮಾಜವಾದಿ ಪಕ್ಷದ (ಎಸ್ ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಪಕ್ಷದ ವರಿಷ್ಠೆ ಮಾಯಾವತಿ, ಬಿಎಸ್ ಪಿ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ ಎಂಬುದು ಕೇವಲ ಭ್ರಮೆ ಎಂದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಯಾವತಿ, ಸಮಾಜವಾದಿ ಪಕ್ಷ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಸಮಾಜವಾದಿ ಪಕ್ಷವು ತಿರಸ್ಕಾರ ಮನೋಭಾವದ ಸಂಕುಚಿತ, ದುರುದ್ದೇಶಪೂರಿತ, ಜಾತಿವಾದ ರಾಜಕಾರಣದಲ್ಲಿ ನಿಪುಣವಾಗಿದೆ. ಹಾಗಾಗಿ ಕೆಲವು ಬಿಎಸ್ ಪಿ ಶಾಸಕರು ಎಸ್ ಪಿ ಸೇರುತ್ತಿದ್ದಾರೆ ಎಂದು ಮಾಧ್ಯಮದ ಮೂಲಕ ಪ್ರಚಾರ ಮಾಡುತ್ತಿದೆ. ಇದು ಕೇವಲ ಭ್ರಮೆ ಎಂದು ಅವರು ಉತ್ತರಿಸಿದ್ದಾರೆ.
ಎಸ್ ಪಿ ಹಾಗೂ ಉದ್ಯಮಿ ಜೊತೆ ಒಪ್ಪಂದ ಮಾಡಿಕೊಂಡು ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ದಲಿತ ಅಭ್ಯರ್ಥಿಯನ್ನು ಸೋಲಿಸಿದ್ದಕ್ಕಾಗಿ ಶಾಸಕರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಮಾಯಾವತಿ ತಿಳಿಸಿದ್ದಾರೆ.
ಈ ಅಮಾನತುಗೊಂಡ ಶಾಸಕರ ಬಗ್ಗೆ ಎಸ್ ಪಿ ಅಲ್ಪ ಪ್ರಾಮಾಣಿಕತೆಯನ್ನು ಹೊಂದಿದ್ದರೆ ಅವರನ್ನು ದೂರವಿರಿಸುತ್ತಿರಲಿಲ್ಲ. ಈ ಶಾಸಕರು ತಮ್ಮ ಪಕ್ಷಕ್ಕೆ ಸೇರಿಕೊಂಡರೆ ಆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಲಿದೆ ಎಂಬುದು ತಿಳಿದಿದೆ. ಅಲ್ಲದೆ ಅಲ್ಲಿನ ನಾಯಕರು ಬಿಎಸ್ ಪಿಗೆ ಸೇರಲು ಉತ್ಸುಕರಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮಂಗಳವಾರದಂದು ಐವರು ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಇವರೆಲ್ಲರೂ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ಬೆನ್ನಲ್ಲೇ ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಬಗ್ಗೆ ವರದಿಯಾಗಿತ್ತು.