ಶಶಿಕಲಾ ಆರೋಗ್ಯದಲ್ಲಿ ಏರುಪೇರು | ಜ.27ರಂದು ಬಿಡುಗಡೆಯಾಗಬೇಕಿದ್ದ ಚಿನ್ನಮ್ಮ ಶಶಿಕಲಾ
ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಜೈಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಪರಪ್ಪನ ಅಗ್ರಹಾರದಲ್ಲಿದ್ದ ಶಶಿಕಲಾ ಅವರಿಗೆ ನಿನ್ನೆ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಜೈಲಿನ ವೈದ್ಯ ಉಮಾ ನೇತೃತ್ವದ ನಾಲ್ವರು ವೈದ್ಯರ ತಂಡ ಶಶಿಕಲಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದೇ ಇದ್ದಲ್ಲಿ ಬೇರೆ ಆಸ್ಪತ್ರೆಗೆ ಅವರನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನೂ ಶಶಿಕಲಾ ಅವರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಬಗ್ಗೆ ವೈದ್ಯರೊಂದಿಗೆ ಜೈಲಿನ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಜನವರಿ 27ರಂದು ಜೈಲಿನಿಂದ ಶಶಿಕಲಾ ಅವರು ಬಿಡುಗಡೆಯಾಗಬೇಕಿತ್ತು. ಈ ನಡುವೆ ಅವರು ಅನಾರೋಗ್ಯಕ್ಕೊಳಗಾಗಿದ್ದಾರೆ.
ಜಯಲಲಿತಾ ಅವರು ತಮಿಳುನಾಡಿನಲ್ಲಿ ಅಮ್ಮಾ ಎಂದು ಕರೆಸಲ್ಪಟ್ಟಿದ್ದರೆ, ಶಶಿಕಲಾ ಅವರು ಚಿನ್ನಮ್ಮ ಎಂದು ಕರೆಯಲ್ಪಡುತ್ತಿದ್ದರು. ಚಿನ್ನಮ್ಮ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ತಮಿಳುನಾಡಿನಲ್ಲಿ ಶಶಿಕಲಾ ಅವರ ಅಭಿಮಾನಿಗಳು, ಬೆಂಬಲಿಗರು ಸಂತೋಷದಲ್ಲಿರುವ ನಡುವೆಯೇ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.