ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕಿಗಾಗಿ ಪ್ರಬಲ ಜನಚಳುವಳಿ ಕಟ್ಟಲು ಸಿಪಿಐ(ಎಂ) ಜಿಲ್ಲಾ ಸಮ್ಮೇಳನ ನಿರ್ಧಾರ
ದಕ್ಷಿಣ ಕನ್ನಡ: ದ.ಕ. ಜಿಲ್ಲೆಯಲ್ಲಿ ಕೇಂದ್ರ ಸರಕಾರ ಭರದಿಂದ ಅನುಸರಿಸಿದ ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣ ನೀತಿಯಿಂದ ಆತಂಕಕಾರಿ ಪ್ರಮಾಣದಲ್ಲಿ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿರುವ ಬಗ್ಗೆ ಸಿಪಿಐ(ಎಂ) ದ.ಕ. ಜಿಲ್ಲಾ ಸಮ್ಮೇಳನವು ತೀವ್ರ ಆತಂಕ ವ್ಯಕ್ತಪಡಿಸಿದೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ) ಮುಖಂಡರು ಮಾಹಿತಿ ನೀಡಿ, ಖಾಸಗಿ ರಂಗ, ಸಾರ್ವಜನಿಕ ರಂಗದ ಉದ್ಯೋಗಾವಕಾಶಗಳು ತೀವ್ರ ಕಡಿತಗೊಂಡಿದೆ. ಸಾವಿರಾರು ಸಂಖ್ಯೆಯಲ್ಲಿ ವಿವಿಧ ಪದವಿಗಳನ್ನು ಪಡೆದು ಹೊರ ಬರುವ ವಿದ್ಯಾರ್ಥಿ ಸಮುದಾಯದ ಎದುರು ನಿರುದ್ಯೋಗದ ಕರಿಛಾಯೆ ವ್ಯಾಪಿಸಿದ್ದು ನಿರಾಶೆ, ಸಿನಿಕತನ ಮತ್ತು ಸಮಾಜಬಾಹಿರ ಕೃತ್ಯಗಳಿಗೆ ದೂಡುತ್ತಿದೆ. ಆದುದರಿಂದ ಜಿಲ್ಲಾಡಳಿತ ಜಿಲ್ಲೆಯ ನಿರುದ್ಯೋಗ ಸಮಸ್ಯೆಯ ಬಗ್ಗೆ ಬಹುಪಕ್ಷೀಯ ಸಭೆಯೊಂದನ್ನು ಜನಪ್ರತಿನಿಧಿಗಳು, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ರಂಗದ ಪ್ರತಿನಿಧಿಗಳು ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ಯುವಜನ ಸಂಘಟನೆಗಳ ಜಂಟಿ ಸಭೆ ನಡೆಸಿ, ಉದ್ಯೋಗಾವಕಾಶಗಳ ಸೃಷ್ಟಿಯ ಬಗ್ಗೆ ವೈಜ್ಞಾನಿಕ ಕಾರ್ಯ ಯೋಜನೆಯೊಂದನ್ನು ರೂಪಿಸಬೇಕೆಂದು ಸಿಪಿಐ(ಎಂ)ನ 23ನೇ ದ.ಕ. ಸಮ್ಮೇಳನದಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದ್ದು ಮುಂಬರುವ ದಿನಗಳಲ್ಲಿ ಈ ಬಗ್ಗೆ ವ್ಯಾಪಕ ಜನಾಭಿಪ್ರಾಯ ಚಳುವಳಿ ರೂಪಿಸಬೇಕೆಂದು ಪಕ್ಷವು ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.
ಜಿಲ್ಲೆಯಲ್ಲಿ ಮಹಿಳೆಯರ ಮೇಲೆ, ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗಿರುವ ಬಗ್ಗೆ ತೀವ್ರ ಆತಂಕಪಡಿಸಿರುವ ಪಕ್ಷದ ಸಮ್ಮೇಳನವು ಈ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿದ್ದು, ಜಿಲ್ಲೆಯಲ್ಲಿರುವ, ಪಾಳೆಯಗಾರಿ, ಊಳಿಗಮಾನ್ಯ ಪ್ರತಿಗಾಮಿ ಮೌಲ್ಯಗಳು ಮತ್ತು ಬಲಪಂಥೀಯ ರಾಜಕೀಯ ಚಿಂತನೆಗಳ, ಪ್ರತಿಫಲ ಎಂದು ಸೈದ್ಧಾಂತಿಕವಾಗಿ ವಿಶ್ಲೇಷಿಸಿರುವ ನಿರ್ಣಯವು ಎಲ್ಲಾ ರೀತಿಯ ಅನಿಷ್ಠ ಪದ್ಧತಿಗಳು, ಜಾತಿ-ಭೇದ, ಲಿಂಗಭೇದ ಮತ್ತು ಅಸ್ಪೃಶ್ಯತಾ ಆಚರಣೆಗಳ ವಿರುದ್ಧ ರಾಜಿರಹಿತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದೆ. ಪ್ರಜಾಸತ್ತಾತ್ಮಕ, ಪ್ರಗತಿಪರ ವೈಜ್ಞಾನಿಕ ಮನೋಭಾವ ಪ್ರಬಲವಾಗಿ ನೆಲೆಯೂರಲು ಶ್ರಮಿಸಬೇಕೆಂದು ಕರೆ ನೀಡಿದೆ.
ಈ ಸಮ್ಮೇಳನವು ಜಿಲ್ಲೆಯ ದಲಿತ ಮತ್ತು ಆದಿವಾಸಿಗಳ ಹಕ್ಕುಗಳ ಸಂರಕ್ಷಣೆಗಾಗಿ, ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ, ಕುದುರೆಮುಖ ರಕ್ಷಿತಾರಣ್ಯ ಅಧಿಕಾರಿಗಳಿಂದ ನಡೆಯುತ್ತಿರುವ ಮೂಲಭೂತ ಹಕ್ಕುಗಳ ದಮನಕಾರಿ ನಿಲುವನ್ನು ಖಂಡಿಸಿ ನಿರ್ಣಯವನ್ನು ಅಂಗೀಕರಿಸಿದೆ.
ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅಂಗೀಕರಿಸಿರುವ ನಿರ್ಣಯದಲ್ಲಿ ಖಾಸಾಗಿ ವೈದ್ಯಕೀಯ ಲಾಭಿಗೆ ಸರಕಾರ ಮಣಿದಿದ್ದು ಬಡವರಿಗೆ ಕನಿಷ್ಠ ಆರೋಗ್ಯಕ್ಕೆ ಅನುಕೂಲವಾದ ಸನ್ನಿವೇಶ ಇಲ್ಲದಾಗಿದೆ. ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಪರಿವರ್ತಿಸಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಬಡವರಿಗೆ ದೊರಕಬೇಕೆಂದು ಒತ್ತಾಯಿಸಿದೆ. ಜಿಲ್ಲೆಯಲ್ಲಿ ಸರಕಾರದ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕೆಂದು ಒತ್ತಾಯಿಸಿದೆ.
ಶಿಕ್ಷಣ ರಂಗದ ಬಗ್ಗೆ ಅಂಗೀಕರಿಸಿರುವ ನಿರ್ಣಯದಲ್ಲಿ ಮೂಲಭೂತ ಅವಶ್ಯಕತೆಗಳ ಕೊರತೆಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳು ಸೊರಗಿದ್ದು ಶಿಕ್ಷಕರ ಕೊರತೆ, ಗ್ರಂಥಾಲಯದ ಕೊರತೆ, ಕಟ್ಟಡ ಕೊರತೆಯು ಸಾಮಾನ್ಯ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ಜಿಲ್ಲೆಯಲ್ಲಿ ನಿವೇಶನ ರಹಿತರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಮನೆ ನಿವೇಶನ ವಿತರಣೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಡಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ಅಕ್ರಮ ಸಕ್ರಮ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ಒತ್ತಾಯಿಸಿದೆ. ಡಿಸೆಂಬರ್ 2 ಮತ್ತು 3ರಂದು ದೇಶದಾದ್ಯಂತ ನಡೆಯುವ ಕಟ್ಟಡ ಕಾರ್ಮಿಕರ ಮುಷ್ಕರವನ್ನು ಯಶಸ್ವಿಗೊಳಿಸಲು ನಿರ್ಣಯಿಸಲಾಗಿದೆ.
ಸಿಪಿಐ(ಎಂ) ದ.ಕ. ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಕೆ.ಯಾದವ ಶೆಟ್ಟಿ ಆಯ್ಕೆ
ಮುಂಬರುವ 3 ವರ್ಷಗಳ ಅವಧಿಗೆ ನೂತನ ದ.ಕ. ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ಯಾದವ ಶೆಟ್ಟಿಯವರನ್ನು ಸಮ್ಮೇಳನವು ಆಯ್ಕೆ ಮಾಡಿದೆ. ಒಟ್ಟು 19 ಮಂದಿಯನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಜೆ.ಬಾಲಕೃಷ್ಣ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ಡಾ.ಕೃಷ್ಣಪ್ಪ ಕೊಂಚಾಡಿ, ಸುಕುಮಾರ್, ಸದಾಶಿವದಾಸ್, ಪದ್ಮಾವತಿ ಶೆಟ್ಟಿಯವರು ಆಯ್ಕೆಗೊಂಡಿದ್ದಾರೆ ಎಂದು ಮುಖಂಡರು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka