ಶಿಲ್ಪಾನಾಗ್ ಗೆ ರೋಹಿಣಿ ಸಿಂಧೂರಿ ಕೊನೆಯದಾಗಿ ಹೇಳಿದ ಮಾತು ಏನು ಗೊತ್ತಾ?
ಮೈಸೂರು: ಮೈಸೂರು ನನಗೆ ತವರೂರಿನ ಭಾವನೆ ಮೂಡಿಸಿದೆ. ಸಾಕಷ್ಟು ಜನರು ಪ್ರೀತಿ ತೋರಿಸಿ ಮಗಳಂತೆ ನೋಡಿಕೊಂಡಿದ್ದಾರೆ. ‘ಥ್ಯಾಂಕ್ಯೂ ಮೈಸೂರು’ ಎಂದು ರೋಹಿಣಿ ಸಿಂಧೂರಿ ಹೇಳಿದ್ದು, ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ, ಒಳ್ಳೆಯ ಕೆಲಸ ಮಾಡುವ ಸಂದರ್ಭದಲ್ಲಿ ಆದ ದಿಢೀರ್ ಬೆಳವಣಿಗೆ ಇದು ಎಂದು ಅವರು ಹೇಳಿದರು.
ಹತಾಶೆ ಮತ್ತು ಅಭದ್ರತೆಯಿಂದ ವರ್ತಿಸಿದ ಶಿಲ್ಪಾನಾಗ್ ಅವರ ಬಗ್ಗೆ ನನಗೆ ಅನುಕಂಪವಿದೆ. ಅಧಿಕಾರಿಯನ್ನು ವರ್ಗಾವಣೆ ಮಾಡಿ ಗುರಿ ಸಾಧಿಸಿದ್ದೇನೆ ಅಂದುಕೊಳ್ಳುವುದು ತಪ್ಪು. ಜಿಲ್ಲೆಯಲ್ಲಿ ಏನು ನಡೆದಿದೆ, ಯಾಕಾಗಿ ನಡೆದಿದೆ ಎನ್ನುವುದು ಸಾರ್ವಜನಿಕರಿಗೂ ಗೊತ್ತಾಗಿದೆ ಎಂದು ಅವರು ಹೇಳಿದರು.
ಎಲ್ಲರನ್ನೂ ಕರೆದು ನಾಟಕವಾಡುವುದು, ಆ ಬಳಿಕ ರಾಜೀನಾಮೆಯನ್ನು ವಾಪಸ್ ಪಡೆಯುವುದು, ಈ ರೀತಿಯ ನಾಟಕವನ್ನು ಮಾಡಿದರೆ ಹೇಗೆ? ಇದನ್ನು ಶಿಲ್ಪಾನಾಗ್ ಅವಲೋಕನ ಮಾಡಬೇಕು. ಯಾರನ್ನೋ ನಾಲ್ಕು ಮಂದಿ ಬೆಂಬಲಿಗರನ್ನು ಕಟ್ಟಿಕೊಂಡು ಅವರ ಮಾತನ್ನು ಕೇಳಿಕೊಂಡು ನಾನು ಕೆಲಸ ಮಾಡುವುದಿಲ್ಲ, ಯಾವುದೇ ವ್ಯವಸ್ಥೆಯಲ್ಲಿ ಅದು ಒಳ್ಳೆಯ ಬೆಳವಣಿಗೆ ಕೂಡ ಅಲ್ಲ ಎಂದು ಸಿಂಧೂರಿ ಹೇಳಿದರು.
ಇನ್ನೂ ನೂತನ ಜಿಲ್ಲಾಧಿಕಾರಿ ಡಾ.ಬಹಾದಿ ಗೌತಮ್ ಅವರನ್ನು ಭೇಟಿ ಮಾಡಿ ಶುಭಕೋರಿದ್ದು, ಕೊವಿಡ್ ಸಂಬಂಧ ಜಿಲ್ಲೆಯಲ್ಲಿ ಏನೆಲ್ಲ ಕೆಲಸಗಳು ನಡೆದಿವೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದೇನೆ. ವಸ್ತು ಸ್ಥಿತಿ ತಿಳಿಸಿದ್ದೇನೆ ಎಂದು ಅವರು ಹೇಳಿದರು.