ಶಿರೂರು ಗುಡ್ಡ ಕುಸಿತ ಪ್ರಕರಣ: ಕೊನೆಗೂ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ
ಕಾರವಾರ: ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ 10 ಮಂದಿ ಮೃತಪಟ್ಟಿದ್ದರೂ ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ, ಇದೀಗ ಇಂದು ಸಿಎಂ ಸಿದ್ದರಾಮಯ್ಯ ಎಡೆ ಬಿಡದೇ ಸುರಿಯುತ್ತಿರುವ ಮಳೆಯ ನಡುವೆಯೇ ಸ್ಥಳಕ್ಕೆ ತೆರಳಿ ಸ್ಥಳ ವೀಕ್ಷಣೆ ಮಾಡಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ್ ಶೈಲ್, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಿತೀಶ್ ಕುಮಾರ್ ಸಿಂಗ್ ಹಾಗೂ ಜಿಲ್ಲಾಧಿಕಾರಿಗಳು ಸಿಎಂಗೆ ಸಾಥ್ ನೀಡಿದರು.
ಶಿರೂರು ಗುಡ್ಡ ಕುಸಿತಕ್ಕೆ ಸಿಲುಕಿದವರ ಪೈಕಿ ಇದುವರೆಗೆ 7 ಮಂದಿ ಮೃತದೇಹ ಪತ್ತೆಯಾಗಿದೆ. ಇನ್ನೂ ಮೂವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಎಂಬವರು ಕೂಡ ಲಾರಿಯ ಜೊತೆಗೆ ಸಜೀವವಾಗಿ ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಮಳೆಯಲ್ಲೇ ಕಾರ್ಯಾಚರಣೆ ಮುಂದುವರಿದಿದೆ. ಅಧಿವೇಶನ ನಡೆದಿದ್ದ ಕಾರಣ ಬರಲು ಆಗಲಿಲ್ಲ. ಈವರೆಗೂ 7 ಜನರ ಮೃತದೇಹಗಳು ಪತ್ತೆಯಾಗಿವೆ. ಉಳಿದರ 3 ಮೃತದೇಹಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಿದ್ದೇವೆ. ಭೂಸೇನೆ ಹಾಗೂ ನೌಕದಳ ಕಾರ್ಯಾಚರಣೆಗೂ ಮನವಿ ಮಾಡಿದ್ದೇವೆ. ಸದ್ಯದಲ್ಲೇ ಮಿಲಿಟರಿ ಕಾರ್ಯಚರಣೆಯೂ ಆರಂಭವಾಗಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ವಿಳಂಬ ಕಾರ್ಯಾಚರಣೆ ಆಗಿಲ್ಲ. ದುರಂತ ಸಂಭವಿಸುತ್ತಲೆ ಕಾರ್ಯಾಚರಣೆ ಆರಂಭ ಮಾಡಿದ್ದೇವೆ. ಘಟನೆ ಸಂಭವಿಸಿದ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿದ್ದಾರೆ. ಡಿಸಿ, ಎಸ್ಪಿ ಸ್ಥಳದಲ್ಲೇ ಇದ್ದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದರು.
ಕೇರಳ ರಾಜ್ಯದ ಒತ್ತಡದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ:
ಗುಡ್ಡ ಕುಸಿತ ನಡೆದು ಹಲವು ದಿನಗಳಾದರೂ ಕಾರ್ಯಾಚರಣೆ ನಿಧಾನ ಗತಿಯಲ್ಲಿ ಸಾಗಿತ್ತು. ಈ ನಡುವೆ ಕೇರಳದ ಲಾರಿ ಚಾಲಕ ಲಾರಿ ಸಹಿತವಾಗಿ ಮಣ್ಣಿನಡಿಯಲ್ಲಿ ಸಿಲುಕಿರುವ ವಿಚಾರ ಕೇರಳದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಅಲ್ಲಿನ ಮಾಧ್ಯಮಗಳು ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಕುರಿತು ಮಹಾನಾಯಕ ವರದಿಯ ಬೆನ್ನಲ್ಲೇ ರಾಜ್ಯದಲ್ಲಿ ವಿಚಾರ ತೀವ್ರತೆ ಪಡೆದುಕೊಂಡಿತ್ತು. ಇದೀಗ ಕಾರ್ಯಾಚರಣೆಗೆ ವೇಗ ದೊರೆತಿದ್ದು, ಸ್ಥಳಕ್ಕೆ ಸಿಎಂ ಭೇಟಿ ನೀಡಿದ್ದಾರೆ. ತ್ವರಿತವಾಗಿ ಕಾರ್ಯಾಚರಣೆ ನಡೆಯುವ ಲಕ್ಷಣ ಕಂಡು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: