10:52 AM Wednesday 12 - March 2025

ಶಿವಮೊಗ್ಗ ಡೈನಮೆಟ್ ಸ್ಫೋಟ: ಸಂಪೂರ್ಣ ವರದಿ ಓದಿ

22/01/2021

ಶಿವಮೊಗ್ಗ: ನಿನ್ನೆ ರಾತ್ರಿ ಶಿವಮೊಗ್ಗ ಹೊರವಲಯದ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್​ನಲ್ಲಿ ನಿನ್ನೆ ರಾತ್ರಿ 10.20ರ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಬಿಹಾರ ಮೂಲದ 8 ಕಾರ್ಮಿಕರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸ್ಥಳದಲ್ಲಿ ಇನ್ನೂ ಕೂಡ ಹೆಚ್ಚಿನ ಸ್ಫೋಟಕಗಳಿದ್ದು, ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು,  ಸ್ಫೋಟಗೊಂಡಿರುವ ಸ್ಥಳದಲ್ಲಿ ಇನ್ನಷ್ಟು ಸ್ಫೋಟಕ ವಸ್ತುಗಳು ಜೀವಂತವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿದ್ದು,  ಸಾರ್ವಜನಿಕರಿಗೆ ಹಾಗೂ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಬಾಂಬ್‌ ನಿಷ್ಕ್ರಿಯ ದಳವು ಬೆಂಗಳೂರು ಮತ್ತು ಮಂಗಳೂರಿನಿಂದ ಬರಲಿದ್ದು ಬಳಿಕವೇ ಮುಂದಿನ ಕಾರ್ಯಾಚರಣೆ ನಡೆಸಲಾಗುತ್ತದೆ. ಅವರ ಪರಿಶೀಲನೆ ಬಳಿಕ, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಮೆಡಿಕಲ್ ಟೀಂ ಶೋಧ ಕಾರ್ಯ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಭಾರಿ ಪ್ರಮಾಣದ ಸ್ಫೋಟಕ ತಂದಿರುವ ಹಿನ್ನೆಲೆಯಲ್ಲಿ, ಅವೆಲ್ಲವು ರಾತ್ರಿಯೇ ಸ್ಫೋಟಗೊಂಡಿರಬಹುದು. ಒಂದು ವೇಳೆ ಕೆಲವು ಸ್ಫೋಟಕಗಳು ಸಜೀವ ಸ್ಥಿತಿಯಲ್ಲಿದ್ದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಬಾಂಬ್ ನಿಷ್ಕ್ರಿಯ ದಳ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಮುಂದಿನ ಕಾರ್ಯಾಚರಣೆ ನಡೆಯಲಿದೆ.

ಹುಣಸೋಡಿನಲ್ಲಿ ನಡೆದ ಸ್ಫೋಟ ಶಿವಮೊಗ್ಗ ಜನರನ್ನು ತಲ್ಲಣಗೊಳಿಸಿದ್ದು ಈ ಸ್ಫೋಟಕ್ಕೂ- ನಿಗೂಢ ಶಬ್ಧಕ್ಕೂ ಸಂಬಂಧವಿದೆಯಾ ಎಂಬುದರ ಬಗ್ಗೆ ತನಿಖಾ ತಂಡ ಸ್ಪಷ್ಟತೆ ನೀಡಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಈ ಸ್ಫೋಟಕ್ಕೆ ಕಾರಣವೇನು? ಶೃಂಗೇರಿಯವರೆಗೆ ಈಶಬ್ಧ ಕೇಳಿದೆ ಎಂದು ಜನ ಹೇಳುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಹುಟ್ಟಿ ಬೆಳೆದರೂ ಈವರೆಗೆ ಇಂತಹ ಶಬ್ಧ ಕೇಳಿಲ್ಲ, ಅಕ್ರಮ ಗಣಿಗಾರಿಕೆ ಎಲ್ಲಾ ಕಡೆ ಇದೆ. ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಕ್ರಮ ತೆಗೆದುಕೊಂಡಿದ್ದೆವು, ಇನ್ನೂ ಮುಂದೆಯೂ ಕ್ರಮ ಕೈಗೊಳ್ಳಲಿದ್ದೇವೆ. ಆದರೆ ಸ್ಫೋಟಕ್ಕೆ ಕಾರಣವೇನು ಎಂದು ತಿಳಿಯಬೇಕಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿರುವ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಹುಣಸೋಡು ಬಳಿ ಜಿಲೆಟಿನ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೂವರು ಅರೆಸ್ಟ್:

ಜಿಲೆಟಿನ್ ಸ್ಪೋಟ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜಮೀನು ಮಾಲೀಕ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಪೋಟ ಸಂಭವಿಸಿದ ಕಲ್ಲು ಗಣಿಗಾರಿಕೆ ಜಮೀನು ಮಾಲೀಕ ಅವಿನಾಶ್ ಕುಲಕರ್ಣಿ, ಗುತ್ತಿಗೆದಾರ ಸುಧಾಕರ್ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ಜೆಡಿಎಸ್ ಮುಖಂಡ ನರಸಿಂಹ ಎಂಬುವರನ್ನು ಸದ್ಯ ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version