ಶುಕ್ರವಾರ, ರವಿವಾರ ಬಿಟ್ಟು ಉಳಿದ ದಿನ ದೇವರಿಲ್ಲವೇ? | ಇಸ್ಲಾಮ್, ಕ್ರೈಸ್ತ ಧರ್ಮದ ಬಗ್ಗೆ ಪ್ರಭಾಕರ್ ಭಟ್ ಅವಹೇಳನಾಕಾರಿ ಹೇಳಿಕೆ
ಮಂಗಳೂರು: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮತ್ತೊಮ್ಮೆ ಇತರ ಧರ್ಮಗಳ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದು, ಈ ರೀತಿಯ ಮಕ್ಕಳಾಟದ ಹೇಳಿಕೆಗಳು ಬೇಕಿತ್ತೇ? ಎನ್ನುವ ಪ್ರಶ್ನೆಗಳಿಗೆ ಸದ್ಯ ಈ ಹೇಳಿಕೆ ಕಾರಣವಾಗಿದೆ.
ಉಳ್ಳಾಲದ ಪಿಲಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್ ಇಸ್ಲಾಮ್ ಹಾಗೂ ಕ್ರೈಸ್ತ ಧರ್ಮದ ಪೂಜಾ ವಿಧಾನಗಳ ಬಗ್ಗೆ ಮಾತನಾಡಿದ್ದು, ನಮ್ಮ ಧರ್ಮದಲ್ಲಿ ಅಂತಹ ಆಚರಣೆಗಳು ಇಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ 12:30 ಗಂಟೆಗೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಲ್ಲಾಹು ಅಕ್ಬರ್ ಎಂದರೆ ಮಾತ್ರ ದೇವರು ಎಂದು ಕೆಲವರು ಹೇಳುತ್ತಾರೆ, ರವಿವಾರದಂದು 7 ಗಂಟೆಗೆ ಅಥವಾ 9 ಗಂಟೆಗೆ ಪೂಜೆ ಮಾಡಿ ಪರಲೋಕದಲ್ಲಿರುವ ನಮ್ಮ ತಂದೆಯೇ ಎಂದರೆ ಮಾತ್ರ ದೇವರು ಸಿಗುತ್ತಾರೆ ಎಂದು ಕೆಲವರು ಹೇಳುತ್ತಾರೆ. ಹಾಗಾದರೆ, ಶುಕ್ರವಾರ, ರವಿವಾರ ಬಿಟ್ಟು ಉಳಿದ ದಿನಗಳಲ್ಲಿ ದೇವರು ಇಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಹಿಂದೂ ಧರ್ಮದಲ್ಲಿ ಯಾವಾಗ ಬೇಕಾದರೂ ದೇವರನ್ನು ಕಾಣಬಹುದು ಎನ್ನುವುದನ್ನು ಹೇಳಲು ಕಲ್ಲಡ್ಕ ಪ್ರಭಾಕರ ಭಟ್ ಅವರು ಇಸ್ಲಾಮ್ ಹಾಗೂ ಕ್ರೈಸ್ತರ ಆಚರಣೆಗಳ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಚರ್ಚೆಗಳು ನಡೆಯುತ್ತಿದೆ.