ಉಚಿತವಾಗಿ ಪಾನಿಪುರಿ ನೀಡದ ಮಾರಾಟಗಾರನನ್ನು ಥಳಿಸಿ ಕೊಂದ ಪಾಪಿಗಳು!

ಉಚಿತವಾಗಿ ಪಾನಿಪುರಿ ನೀಡಲು ನಿರಾಕರಿಸಿದ ಪಾನಿಪುರಿ ಮಾರಾಟಗಾರನ್ನು ಗೂಂಡಾಗಳ ಗುಂಪೊಂದು ಹೊಡೆದು ಹೀನಾಯವಾಗಿ ಹತ್ಯೆ ಮಾಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದ ಚಕೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಎಫ್ ಐಆರ್ ದಾಖಲಾಗಿಲ್ಲ ಎನ್ನಲಾಗಿದೆ.
ಕಾನ್ಪುರದ ದೇಹತ್ ನಿವಾಸಿ ಪ್ರೇಮ್ ಚಂದ್ರ (40) ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕಾನ್ಪುಪುರದ ಚಕೇರಿಯಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಪಾನಿಪುರಿ ಮಾರಾಟಮಾಡಿ ಮನೆಗೆ ಹಿಂದಿರುಗುತ್ತಿದ್ದಾಗ, ಸ್ಥಳೀಯರಾದ ಧೀರಜ್ ಮತ್ತು ಅವನ ನಾಲ್ವರು ಸಹಚರರು ಉಚಿತವಾಗಿ ಪಾನಿಪುರಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಉಚಿತವಾಗಿ ಕೊಡಲು ಪ್ರೇಮ್ ನಿರಾಕರಿಸಿದಾಗ, ಆರೋಪಿಗಳು ಪಾನಿಪುರಿ ಮಾರಾಟಗಾರನನ್ನು ನಿಂದಿಸಿ, ಥಳಿಸಲು ಆರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕೂಡಲೇ ಸ್ಥಳೀಯರು ಪ್ರೇಮ್ ಅವರನ್ನು ಕೀಡಿಗೇಡಿಗಳಿಂದ ರಕ್ಷಿಸಿದ್ದಾರೆ. ಆದಾಗ್ಯೂ, ರಾತ್ರಿಯಾಗುತ್ತಿದ್ದಂತೆ, ಪ್ರೇಮ್ ನ ಸ್ಥಿತಿಯು ತೀವ್ರವಾಗಿ ಹದಗೆಟ್ಟಿದ್ದು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರೇಮ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಚಕೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ದುಬೆ ತಿಳಿಸಿದ್ದಾರೆ.