ಸೂಪರ್ ಮಾರ್ಕೆಟ್ ನಲ್ಲಿ ಡಾ.ಶ್ರೀನಿವಾಸ್ ಕಕ್ಕಿಲ್ಲಾಯರ ವಿರುದ್ಧ ಕುಟಿಲ ಸಂಚು | ಅಖಿಲ ಭಾರತ ವಕೀಲರ ಒಕ್ಕೂಟ
ಮಂಗಳೂರು: ನಗರದ ಕದ್ರಿಯ ಸೂಪರ್ ಮಾರ್ಕೆಟ್ ಒಂದರಲ್ಲಿ ತಾ.18.05.2021 ರಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯರವರು ಮಾಸ್ಕ್ ಧರಿಸದೆ ಅಗತ್ಯ ವಸ್ತುಗಳನ್ನು ಖರೀದಿಸಲು ಹೋಗಿದ್ದು ಈ ವೇಳೆ ಅಲ್ಲಿನ ಸಿಬ್ಭಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿರುತ್ತಾರೆಂದು ತಿಳಿಸುವ ವೀಡಿಯೋಗಳು ಮರುದಿನದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸೂಪರ್ ಮಾರ್ಕೆಟ್ ನ ಮಾಲೀಕರು ಈ ಬಗ್ಗೆ ವೈದ್ಯರ ಮೇಲೆ ಕದ್ರಿ ಪೋಲೀಸು ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ವೈದ್ಯರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆಯೆಂದು ಮಂಗಳೂರಿನ ಪೊಲೀಸ್ ಕಮಿಷನರ್ ತಾ19.05.2021 ರಂದು ಪತ್ರಿಕಾ ಹೇಳಿಕೆ ನೀಡಿರುತ್ತಾರೆ. ಇದರ ಬೆನ್ನಿಗೇ ಡಾ. ಬಿ.ಎಸ್. ಕಕ್ಕಿಲ್ಲಾಯರವರು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೆ, ಸರಕಾರದ ನಿಯಮಗಳ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವುದನ್ನು ಖಂಡಿಸುವುದಾಗಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಕೂಡಾ ತ್ವರಿತವಾಗಿ ಪತ್ರಿಕಾ ಪ್ರಕಟನೆಯನ್ನು ನೀಡಿದೆ.
ಕೋವಿಡ್ ಮಹಾಮಾರಿಯ ನಿಯಂತ್ರಣದ ಬಗ್ಗೆ ಆಳವಾದ ಅಧ್ಯಯನ ಮಾಡಿ ದೇಶದ ಜನತೆಯನ್ನು ರಕ್ಷಿಸಲು ಅಗತ್ಯವಿರುವ ಕ್ರಮಗಳ ಬಗ್ಗೆ ನಿರಂತರ ಜನತೆಗೂ ಸರಕಾರಗಳಿಗೂ ತಿಳಿಹೇಳುತ್ತಿರುವ ಓರ್ವ ಪ್ರಗತಿಪರ ಕಾಳಜಿಯುಳ್ಳ ನಗರದ ಖ್ಯಾತ ವೈದ್ಯರು ಡಾ.ಶ್ರೀನಿವಾಸ ಕಕ್ಕಿಲ್ಲಾಯರು ಎಂಬ ವಾಸ್ತವ ಕಟು ಸತ್ಯವನ್ನು ಮರೆತು ಅವರನ್ನು ಓರ್ವ ಕಾನೂನು ಭಂಜಕ ಖಳನಾಯಕನಂತೆ ಬಿಂಬಿಸುತ್ತಾ ವೈದ್ಯರ ತೇಜೋವಧೆಯನ್ನು ಮಾಡುತ್ತಿರುವ ಸಾಮಾಜಿಕ ಮಾಧ್ಯಮಗಳನ್ನೂ ಒಳಗೊಂಡ ಪ್ರಜಾತಂತ್ರವಿರೋಧಿ ಮಾಧ್ಯಮಗಳ ದುರ್ವರ್ತನೆಯನ್ನು ಅಖಿಲ ಭಾರತ ವಕೀಲರ ಒಕ್ಕೂಟ, ದ.ಕ.ಜಿಲ್ಲೆ, ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘ ತಿಳಿಸಿದೆ.
ಆಡಳಿತ ಪಕ್ಷದ ಬೆಂಬಲಿಗ ಕೆಲ ಸ್ಥಾಪಿತ ಹಿತಾಸಕ್ತಿಗಳು ಸೂಪರ್ ಮಾರ್ಕೆಟಿನ ಮಾಲಕ, ಸಿಬ್ಬಂದಿಯವರೊಡನೆ ಶಾಮೀಲಾಗಿ ಕಕ್ಕಿಲ್ಲಾಯರ ವಿರುದ್ಧ ಈ ಕುಟಿಲ ಸಂಚನ್ನು ಹೆಣೆದಿರುವ ವಾಸನೆ ಪ್ರಜ್ಞಾವಂತರೆಲ್ಲರ ಮೂಗಿಗೆ ಬಡಿಯುತ್ತಿದೆ. ಸೂಪರ್ ಮಾರ್ಕೆಟಿನೊಳಗೆ ಪ್ರವೇಶಿಸುವಾಗ ಮಾಸ್ಕಿನ ಬಗ್ಗೆ ಆಕ್ಷೇಪವೆತ್ತದ ಸೂಪರ್ ಮಾರ್ಕೆಟಿನವರು ಬಿಲ್ಲಿಂಗ್ ವೇಳೆ ಈ ಬಗ್ಗೆ ವೈದ್ಯರೊಡನೆ ಅನುಚಿತವಾಗಿ ವರ್ತಿಸಿದ್ದು ತೀರಾ ಖಂಡನೀಯ ಮಾತ್ರವಲ್ಲ , ವಿಷಯವೆಲ್ಲವೂ ತಿಳಿಯಾದ ಮೇಲೆ ಸೂಪರ್ ಮಾರ್ಕೆಟಿನ ಸಿಸಿಟಿವಿ ತುಣುಕನ್ನು ಮಾಧ್ಯಮಗಳಿಗೆ ಮತ್ತು ಮೂರನೇಯವರಿಗೆ ಒದಗಿಸಿದ ಕೃತ್ಯವೂ ಕಾನೂನು ಬಾಹಿರ ಅಕ್ಷಮ್ಯ ಅಪರಾಧವಾಗಿರುತ್ತದೆ. ಇದರ ಹಿಂದೆ ಕಾಣದ ಕೈಗಳು ಕಾರ್ಯವೆಸಗಿರುವುದು ಸ್ಪಷ್ಟವಾಗಿದೆ. ಸೂಪರ್ ಮಾರ್ಕೇಟಿನವರ ಈ ಕುಕೃತ್ಯವು ಗ್ರಾಹಕರ ಹಕ್ಕಿನ ಸಂಪೂರ್ಣ ಉಲ್ಲಂಘನೆ ಮಾತ್ರವಲ್ಲ, ಅತ್ಯಂತ ಹೇಯ ಮಾನಹಾನಿಕರ ಕೃತ್ಯವೂ ಆಗಿದೆ. ಮಾಸ್ಕಿನ ನೆವನದಲ್ಲಿ ಸಾರ್ವಜನಿಕರ ಮಧ್ಯೆ ವೈದ್ಯರನ್ನು ನಿಂದಿಸಿ ಅವಹೇಳನ ಮಾಡಿ ಮಾನಹಾನಿಗೈಯುವ ಯಾವುದೇ ಕೃತ್ಯಗಳನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಮಾತ್ರವಲ್ಲ ಸಾಮಾಜಿಕ, ವೈದ್ಯಕೀಯ ಸೇವೆಯ ಹೊರತಾಗಿ ವೈದ್ಯ ಸಮುದಾಯದ ಹಿತರಕ್ಷಣೆಗಾಗಿಯೂ ಅವಿರತವಾಗಿ ದುಡಿದ ಡಾ.ಶ್ರೀನಿವಾಸ್ ಕಕ್ಕಿಲ್ಲಾಯರು ತಮ್ಮ ಪ್ರತಿಷ್ಠಿತ ಸಹೋದ್ಯೋಗಿಯೆಂಬುದನ್ನೂ ಮರೆತು ಅವರ ಬೆಂಬಲಕ್ಕೆ ನಿಲ್ಲುವ ಬದಲು ಅವರನ್ನು ಹಳಿದು ಪ್ರತ್ಯೇಕಿಸಿ ಖಂಡನಾ ಹೇಳಿಕೆಯನ್ನು ನೀಡಿದ ಭಾರತೀಯ ವೈದ್ಯಕೀಯ ಸಂಘ, ಮಂಗಳೂರು ಘಟಕದ ಹೊಣೆಗೇಡಿತನದ ವರ್ತನೆಯನ್ನೂ ನಮ್ಮ ವಕೀಲರ ಸಂಘಟನೆಯು ಕಟು ಶಬ್ದಗಳಿಂದ ಖಂಡಿಸುತ್ತದೆ. ಡಾ.ಶ್ರೀನಿವಾಸ್ ಕಕ್ಕಿಲ್ಲಾಯರು ಕೂಡಲೇ ಸಂಬಂಧ ಪಟ್ಟವರ ಮೇಲೆ ಕಾನೂನಿನ ಕ್ರಮಗಳನ್ನು ತೆಗೆದುಕೊಳ್ಳಲು ಅಗತ್ಯವಿರುವ ಸಹಾಯವನ್ನೂ ನಮ್ಮ ಸಂಘಟನೆ ನೀಡುತ್ತದೆ ಮತ್ತು ಅವರಿಗೆ ಸಂಪೂರ್ಣ ಬೆಂಬಲವನ್ನು ಸಾರುತ್ತದೆ.
ವೈದ್ಯರ ಹೆಸರಿಗೆ ಮಸಿ ಬಳಿಯುವ ಇಂತಹ ಕ್ಷುಲ್ಲಕ ಮತಿಗೇಡಿತನವನ್ನು ಬಿಟ್ಟು, ಕೋವಿಡ್ ಮಹಾಮಾರಿಯನ್ನು ಎದುರಿಸಲು ಅಗತ್ಯವಿರುವ ಸ್ವಚ್ಛ ಸುಸಜ್ಜಿತ ಆಸ್ಪತ್ರೆಗಳ ಬಗ್ಗೆ, ಕೇರ್ ಸೆಂಟರುಗಳ ಬಗ್ಗೆ, ಆಮ್ಲಜನಕದ ಬಗ್ಗೆ, ವೆಂಟಿಲೇಟರುಗಳ ಬಗ್ಗೆ, ಶವಗಳ ವಿಲೆವಾರಿಗಳ ಬಗ್ಗೆ, ಕೋವಿಡ್ ಲಸಿಗೆಗಳು ಜನಮಾನಸಕ್ಕೆ ಶೀಘ್ರ ತಲಪುವ ಬಗ್ಗೆ, ಜನರ ಜೀವನ ಭದ್ರತೆಯ ಬಗ್ಗೆ, ಆರ್ಥಿಕ ಸಬಲತೆಯ ಬಗ್ಗೆ ಸರಕಾರಗಳ ಕಣ್ಣುತೆರೆಸುವ ಕಾರ್ಯಗಳನ್ನು ಇನ್ನಾದರೂ ಈ ಜವಾಬ್ದಾರಿಯುತ ಮಾಧ್ಯಮಗಳು ಮತ್ತು ವೈದ್ಯಕೀಯ ಸಮುದಾಯಗಳು ಕೈಗೊಂಡು ಜನತೆಯ ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ಅಖಿಲ ಭಾರತ ವಕೀಲರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಸಂಘದ ಅದ್ಯಕ್ಷರಾದ ಯಶವಂತ ಮರೋಳಿ, ಕಾರ್ಯದರ್ಶಿ ರಾಮಚಂದ್ರ ಬಬ್ಬುಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.