ಸಿದ್ದರಾಮೋತ್ಸವಕ್ಕೆ ಹರಿದು ಬಂದ ಜನ ಸಾಗರ: ಸಿದ್ಧರಾಮಯ್ಯಗೆ ಅಭಿನಂದನೆಗಳ ಮಹಾಪೂರ

ದಾವಣಗೆರೆ: ಸಿದ್ದರಾಮೋತ್ಸವ ಸಮಾರಂಭಕ್ಕೆ ರಾಜ್ಯಾದ್ಯಂತ ಜನರು ಹರಿದು ಬರುತ್ತಿದ್ದು, ದಾವಣಗೆರೆಯಲ್ಲಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆ ಅಭಿಮಾನಿಗಳಿಗೆ ಮಳೆ ಕೂಡ ಶಾಕ್ ನೀಡಿದೆ. ಮಳೆಯನ್ನೂ ಲೆಕ್ಕಿಸದೇ ಅಭಿಮಾನಿಗಳು ಸಮಾರಂಭದತ್ತ ಮುನ್ನುಗ್ಗಿದ್ದಾರೆ.
ಬೀದರ್, ಔರದ್, ಬಾಗಲಕೋಟೆ, ಗುಲ್ಬರ್ಗ, ಯಾದಗಿರಿ,ಚುಂಚನ ಸೂರು, ಗುರುಮಟ್ಕಲ್, ಸುರಪುರ, ಬಾದಾಮಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ. ಇದಲ್ಲದೇ ಇತರ ಜಿಲ್ಲೆಗಳಿಂದಲೂ ಭಾರೀ ಸಂಖ್ಯೆಯ ಜನರು ದಾವಣಗೆರೆಯತ್ತ ಪ್ರಯಾಣ ಬೆಳೆಸಿದ್ದಾರೆ.
ಸಿದ್ದರಾಮಯ್ಯ ಅಮೃತಮಹೋತ್ಸವ ಕಾರ್ಯಕ್ರಮಕ್ಕೂ ಮುನ್ನ ದಾವಣಗೆರೆಯ ದುರ್ಗಾಂಬೆ ದೇಗುಲ ಹಾಗೂ ಹಜರತ್ ಅಲಿ ಶಾ ದರ್ಗಾಕ್ಕೆ ಭೇಟಿ ನೀಡಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಸಿದ್ದರಾಮೋತ್ಸವಕ್ಕೆ ಬರುವ ಕಾರ್ಯಕರ್ತರ ಊಟೋಪಚಾರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೊಸರನ್ನ, ಪಲಾವ್, ಬಿಸಿಬೇಳೆಬಾತ್ 80 ಟನ್ ಅಕ್ಕಿ, 15 ಟನ್ ಬೇಳೆ, 700 ಟಿನ್ ಎಣ್ಣೆ (1 ಟಿನ್ ಅಂದರೆ 10.5 ಕೆಜಿ), ಟೊಮೆಟೊ 8 ಟನ್, ಈರುಳ್ಳಿ 18 ಟನ್, 15,000 ನಿಂಬೆಹಣ್ಣು, 4 ಟನ್ ಬಿನ್ಸ್, 4 ಟನ್ ತುಪ್ಪ, 2 ಸಾವಿರ ಲೀಟರ್ ಮೊಸರು, 12 ಸಾವಿರ ಲೀ ಹಾಲು, 4 ಟನ್ ಕೋಸು, 2 ಕ್ವಿಂಟಲ್ ಶುಂಠಿ, 6 ಟನ್ ಹಸಿಮೆಣಸಿನಕಾಯಿ, 2 ಟನ್ ಒಣಕೊಬ್ಬರಿ ಸೇರಿ 25 ಟನ್ ತರಕಾರಿಗಳನ್ನು ಬಳಸಲಾಗುತ್ತಿದೆ. ಊಟ ಬಡಿಸಲು 6 ಲಕ್ಷ ಅಡಿಕೆತಟ್ಟೆ ಹೊಂದಿಸಿಕೊಂಡಿದ್ದು, 800 ಡಬ್ಬಿ ಉಪ್ಪಿನಕಾಯಿ ತರಿಸಲಾಗಿದೆ.
ಕಾರ್ಯಕರ್ತರಿಗೆ ಸಿಹಿ ವಿತರಿಸಲು 6 ಲಕ್ಷ ಮೈಸೂರುಪಾಕ್ ಸಿದ್ಧಪಡಿಸಲಾಗಿದೆ. ಇದಕ್ಕಾಗಿ 5 ಟನ್ ತುಪ್ಪ, 2 ಟನ್ ಎಣ್ಣೆ, 18 ಟನ್ ಸಕ್ಕರೆ, 18 ಟನ್ ಕಡಲೆಹಿಟ್ಟು ಬಳಕೆಯಾಗಿದೆ. ರಾಹುಲ್ ಗಾಂಧಿ ಮತ್ತು 2 ಸಾವಿರ ವಿವಿಐಪಿಗಳಿಗಾಗಿ ಹೋಳಿಗೆ, ಪೂರಿ, ಚನ್ನಾ ಮಸಾಲ, ಪಲಾವ್, ಮೈಸೂರುಪಾಕ್ ಸೇರಿದಂತೆ ಹಲವು ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.
ಲಕ್ಷಾಂತರ ಅಭಿಮಾನಿಗಳು ಕಾರ್ಯಕ್ರಮ ನಡೆಯುತ್ತಿರುವ ಶಾಮನೂರು ಪ್ಯಾಲೇಸ್ ಮೈದಾನಕ್ಕೆ ಈಗಾಗಲೇ ಆಗಮಿಸಿದ್ದಾರೆ. ಸಿದ್ದರಾಮಯ್ಯನವರು ಸಹ ದಾವಣಗೆರೆಯಲ್ಲಿ ಇದ್ದು, ಅತಿಥಿ ಗೃಹದಿಂದ ಕಾರ್ಯಕ್ರಮ ನಡೆಯುವ ವೇದಿಕೆಗೆ ತೆರಳುವ ವೇಳೆ ಅವರನ್ನು ಅಭಿನಂದಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಹೀಗಾಗಿ ಜನಜಂಗುಳಿಯನ್ನು ನಿಯಂತ್ರಿಸಲು ಸಿದ್ಧರಾಮಯ್ಯ ಹರ ಸಾಹಸಪಟ್ಟಿದ್ದಾರೆ. ಮೈದಾನದಲ್ಲಿ ನೆರೆದಿರುವ ಸಿದ್ದರಾಮಯ್ಯನವರ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದು ಅವರ ಉತ್ಸಾಹ ಮೇರೆ ಮೀರಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka