ಉಗ್ರಪ್ಪಗೆ ರಕ್ಷಣೆ ಸಲೀಂ ಅವರ ಉಚ್ಛಾಟನೆ: “ಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು” | ಕುಮಾರಸ್ವಾಮಿ ಕಿಡಿ
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಕಾಂಗ್ರೆಸ್ ಮುಖಂಡ ಸಲೀಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಉಗ್ರಪ್ಪ ಅವರು ಪತ್ರಿಕಾಗೋಷ್ಠಿಗೂ ಮುನ್ನು ನಡೆಸಿದ ಗುಪ್ತ ವಿಡಿಯೋಗೆ ಸಂಬಂಧಿಸಿದಂತೆ ಸಲೀಂ ಅವರ ಪಕ್ಷದಿಂದ ಉಚ್ಛಾಟನೆ ಮಾಡಿ, ಉಗ್ರಪ್ಪ ಅವರಿಗೆ ಕೇವಲ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದು, ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಸರಣಿ ಟ್ವೀಟ್ ನಲ್ಲಿ ಸಿದ್ದರಾಮಯ್ಯನವರನ್ನು ತರಾಟೆಗೆತ್ತಿಕೊಂಡಿರುವ ಕುಮಾರಸ್ವಾಮಿ, ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ʼಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ! ಎಂದು ಹೇಳಿದ್ದಾರೆ.
ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ʼಅಹಿಂದʼ ಎಂದು ಜನರನ್ನು ‘ಅಡ್ಡದಾರಿ’ ಹಿಡಿಸಿದ ʼಸಿದ್ದಹಸ್ತ ಶೂರರುʼ ತಮ್ಮ ಸ್ವಪಕ್ಷದಲ್ಲೇ ಮುಸ್ಲೀಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ʼಅಲ್ಪಸಂಖ್ಯಾತರ ಅಂತ್ಯ ರಾಜಕಾರಣʼದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕುಯ್ಯುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ʼಸಿದ್ದಹಸ್ತ ಸೂತ್ರಧಾರಿʼಯ ಒಳ ರಾಜಕೀಯಕ್ಕೆ ಬಲಿಯಾಗುತ್ತಿರುವ ಅಲ್ಪಸಂಖ್ಯಾತ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ʼನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣ ಎಂದು ಜನರಿಗೆ ಗೊತ್ತಾಗಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಭೈರತಿ ಸುರೇಶ್ ತಮ್ಮ ಗೆಲುವಿಗೆ ಬೇಕಿದ್ದ 19 ಮತ ಮೀರಿ 23 ಮತ ಪಡೆದು ಗೆಲ್ಲುತ್ತಾರೆ!! ಇಲ್ಲಿ ಸರಡಗಿ ಸೋಲಿಗೆ, ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ʼಸಿದ್ದಸೂತ್ರʼ ಹಣೆದಿದ್ದು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.
ಈ ʼಸಿದ್ದಹಸ್ತರ ಸಿದ್ದಸೂತ್ರʼ ಅಲ್ಲಿಗೇ ನಿಲ್ಲುವುದಿಲ್ಲ. 2016ರಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಅಧಿಕೃತ ಟಿಕೆಟ್ ಕೊಡುತ್ತದೆ ಎಂದು ಅವರು ಹೇಳಿದರು.
ಆಗ ಭೈರತಿ ಸುರೇಶ್ ಪರ ಲಾಬಿ ಮಾಡಿದ್ದ ಸಿದ್ಧಕಲೆ ಸೂತ್ರಧಾರರು, ಅವರನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಒಳಸುಳಿ ಸೃಷ್ಟಿಸಿ ಷರೀಫರ ಮೊಮ್ಮಗನನ್ನು ಸೋಲಿಸುತ್ತಾರೆ! 2023ರ ಚುನಾವಣೆಯಲ್ಲಿ ಭೈರತಿ ಸುರೇಶ್ʼಗೇ ಹೆಬ್ಬಾಳದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ. ಹಾಗಾದರೆ ಜಾಫರ್ ಷರೀಫರ ಮೊಮ್ಮಗನ ಕಥೆ ಏನು? ಎಂದು ಅವರು ಪ್ರಶ್ನಿಸಿದರು.
ಕಳೆದ ಲೋಕಸಭೆ ಚುನಾವಣೆ ನಂತರ ತಮಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿದ ರೋಷನ್ ಬೇಗ್ʼಗೆ ಶೋಕಾಸ್ ನೊಟೀಸ್ ನೀಡಿ, ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದರು ಎಂಬ ಕಾರಣಕ್ಕೆ ಅವರನ್ನು ಬೇಕಾಬಿಟ್ಟಿ ನಡೆಸಿಕೊಂಡು ಅಪಮಾನ ಮಾಡುತ್ತಾರೆ ಸಿದ್ದಹಸ್ತರು. ಕೊನೆಗೆ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದಿಂದಲೇ ದೂರವಾಗುತ್ತಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಮೈಸೂರಿನ ಹಿರಿಯ ನಾಯಕ ತನ್ವೀರ್ ಸೇಠ್ ಅವರನ್ನು ಅಪಮಾನಕರವಾಗಿ ನಡೆಸಿಕೊಂಡಿದ್ದು ಇದೇ ಸಿದ್ದಹಸ್ತರು. ಅಲ್ಲಿನ ಪಾಲಿಕೆಯಲ್ಲಿ ಜಾತ್ಯತೀತ ಶಕ್ತಿಗಳನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ ತನ್ವೀರ್ ಮೇಲೆ ಕೂಗಾಡಿದ ಸಿದ್ದಸೂತ್ರ ಪ್ರವೀಣರು, ಇನ್ನಿಲ್ಲದ ಅಪಮಾನ ಮಾಡಿ ನಿಂದಿಸುತ್ತಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಆಡಿಯೋ ನೆಪದಲ್ಲಿ ಸಲೀಂ ಮೊಹಮದ್ ಬಲಿ ಪಡೆದಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ದೊಡ್ಡವರ ರಕ್ಷಣೆ ಮಾಡಲಾಗಿದೆ. ಸಲೀಂ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ʼರಸಸ್ವಾದʼ ಮಾಡಿ ಪುಕ್ಕಟೆ ಮನರಂಜನೆ ಪಡೆದ ವ್ಯಕ್ತಿಗೆ ರಕ್ಷಣೆ ನೀಡಿ ಓರ್ವ ಅಲ್ಪಸಂಖ್ಯಾತ ನಾಯಕನನ್ನು 6 ವರ್ಷ ಉಚ್ಚಾಟಿಸಲಾಗಿದೆ. ಇದು ಯಾವ ಸೀಮೆ ನ್ಯಾಯ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಇದೇನಾ ಸಿದ್ದಹಸ್ತರೇ? ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುತ್ತಾ, ಸಾಧ್ಯವಾದರೆ ಆ ಮಗುವಿನ ಕತ್ತನ್ನೂ ಕುಯ್ಯುತ್ತಾ ನಡೆಸುತ್ತಿರುವ ಇಂಥ ನೀಚ ರಾಜರಾರಣ ಮುಸ್ಲೀಂ ಬಾಂಧವರಿಗೆ ಈಗ ಗೊತ್ತಾಗಿಬಿಟ್ಟಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದಿರಿ, ಜಾಫರ್ ಷರೀಫರ ಮೊಮ್ಮಗನನ್ನು ಮುಗಿಸಿದಿರಿ, ರೋಷನ್ ಬೇಗ್ ವಿರುದ್ಧ ರೋಷ ತೀರಿಸಿಕೊಂಡಿರಿ, ತನ್ವೀರ್ ಸೇಠ್ ಮೇಲೆ ಹಗೆ ಸಾಧಿಸಿದಿರಿ, ಇನ್ನೊಬ್ಬರ ಮೇಲಿನ ಸೇಡನ್ನು ಬಡಪಾಯಿ ಸಲೀಂ ಮೇಲೆ ತಿರುಗಿಸಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದು ʼಕಿರಾತಕ ರಾಜಕಾರಣʼ ಮಾಡಿದಿರಿ ಎಂದು ಅವರು ಆರೋಪಿಸಿದ್ದಾರೆ.
ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ ಸಿದ್ದಹಸ್ತರೇ. ನಿಮಗೆ ಪಾಠ ಕಲಿಸುವ ಈಗಷ್ಟೇ ಆರಂಭವಾಗಿದೆ. ಕಾದು ನೋಡಿ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb