ಸರ್ಕಾರದ ಖಜಾನೆ ಯಾರಪ್ಪನ ಮನೆಯ ದುಡ್ಡಲ್ಲ: ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಗುಡುಗು - Mahanayaka
1:27 PM Saturday 14 - December 2024

ಸರ್ಕಾರದ ಖಜಾನೆ ಯಾರಪ್ಪನ ಮನೆಯ ದುಡ್ಡಲ್ಲ: ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಗುಡುಗು

siddaramaiha
06/01/2023

ಉಳ್ಳಾಲ: ಕರಾವಳಿಯ ಜನ ರಾಜಕೀಯವಾಗಿ ಪ್ರಬುದ್ಧರು. ಇಲ್ಲಿನ ಜನ ನೆಮ್ಮದಿಯಾಗಿ ಇರಬೇಕು ಎನ್ನುವುದಾರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ತೀರ್ಮಾನವನ್ನು ಮಾಡಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಉಳ್ಳಾಲ ವಿಧಾನಸಭಾ ಕ್ಷೇತ್ರದ ಹರೇಕಳದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು,  2013ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 8 ಸ್ಥಾನದಲ್ಲಿ 7 ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದಿರಿ, ಉಡುಪಿಯಲ್ಲಿ 5 ರಲ್ಲಿ 3 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಿರಿ. ಇದು ಮತ್ತೆ ಮರುಕಳಿಸಬೇಕು. ಇಂದು ಎಲ್ಲಾ ಜಾತಿ, ಧರ್ಮಗಳ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿಯಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ. ಎಲ್ಲ ಜನರಿಗೂ ನ್ಯಾಯವನ್ನು, ರಕ್ಷಣೆಯನ್ನು ನೀಡುವುದು ಕಾಂಗ್ರೆಸ್‌ ಮಾತ್ರ.

ಬಿಜೆಪಿಯವರು ಚುನಾವಣಾ ಸಂದರ್ಭದಲ್ಲಿ ಅನೇಕ ಭರವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದ ಮೇಲೆ ತಾವು ನೀಡಿದ್ದ ಭರವಸೆಗಳನ್ನು ಮರೆತು ಸಮಾಜ ಒಡೆಯುವ ಕೆಲಸ ಮಾಡುತ್ತಾರೆ ಎಂದ ಹೇಳಿದರು.

ನಮ್ಮದು ಬಹುತ್ವದ ದೇಶ. ಇಲ್ಲಿ ಅನೇಕ ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ಜನರಿದ್ದಾರೆ. ದೇಶದಲ್ಲಿ 140 ಕೋಟಿ ಜನಸಂಖ್ಯೆ ಹೊಂದಿದ್ದೇವೆ. ಕೆಲವೇ ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ನಂ.1 ಆಗುತ್ತೇವೆ. ಇಷ್ಟು ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕು, ಎಲ್ಲರಿಗೂ ರಕ್ಷಣೆ ಸಿಗಬೇಕು. ಅಂಬೇಡ್ಕರರು ನೀಡಿರುವ ಸಂವಿಧಾನದಲ್ಲಿ ಯಾರು ಯಾವ ಧರ್ಮ ಬೇಕಾದರೂ ಅನುಸರಿಸುವ ಸ್ವಾತಂತ್ರ್ಯ ನೀಡಿದ್ದಾರೆ. ದೇಶದ ಬಹುತ್ವದ ರಕ್ಷಣೆಯ ವಿಚಾರಗಳನ್ನು ಸಂವಿಧಾನ ಒಳಗೊಂಡಿದೆ. ಆದರೆ ಬಿಜೆಪಿಗೆ ಈ ಸಂವಿಧಾನದಲ್ಲಿ ನಂಬಿಕೆಯಿಲ್ಲ. ಕಾರಣ ಅವರಿಗೆ ಸಮಾನ ಹಕ್ಕುಗಳು, ಸಮಾನ ಅವಕಾಶಗಳನ್ನು ನೀಡುವುದರಲ್ಲಿ ಒಲವಿಲ್ಲ. ಅಸಮಾನತೆಯ ಸಮಾಜ, ಜಾತಿ ವ್ಯವಸ್ಥೆ ಇರಬೇಕು ಹೀಗಿದ್ದಾಗ ಜಾತಿ ಧರ್ಮಗಳ ಆಧಾರದ ಮೇಲೆ ಜನರನ್ನು ಪರಸ್ಪರ ಎತ್ತಿಕಟ್ಟಿ, ಅಸಮಾನತೆಯನ್ನು ಸೃಷ್ಟಿಸಿ ಆ ಮೂಲಕ ಶೋಷಣೆ ಮಾಡಬಹುದು ಎಂಬುದು ಅವರ ಲೆಕ್ಕಾಚಾರ. ಎಲ್ಲರೂ ಸಮಾನರಾಗಿ, ಸಮಾನತೆಯ ಸಮಾಜ ನಿರ್ಮಾಣವಾದರೆ ಶೋಷಣೆಗೆ ಅವಕಾಶ ಆಗಲ್ಲ ಎಂಬುದು ಅವರ ಯೋಚನೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಕಾರವಾರ ಜಿಲ್ಲೆಯ ಅನಂತ ಕುಮಾರ್‌ ಹೆಗ್ಡೆ ಅವರು ನಾವು ಅಧಿಕಾರಕ್ಕೆ ಬಂದಿರುವುದೇ ಈ ಸಂವಿಧಾನವನ್ನು ಬದಲಾವಣೆ ಮಾಡಲು ಎಂದು ಹೇಳಿದ್ದರು. ಸಂವಿಧಾನದಲ್ಲಿ ನಂಬಿಕೆ, ಗೌರವ ಇಲ್ಲದವರು ಜನಪ್ರತಿನಿಧಿಯಾಗಿರಬಾರದು. ಇಂಥವರು ಗ್ರಾಮ ಪಂಚಾಯತ್‌ ಸದಸ್ಯನಾಗಿರಲು ಕೂಡ ನಾಲಾಯಕ್. ಅವರು ಹೀಗೆ ಹೇಳುವಾಗ ಅಮಿತ್‌ ಶಾ ಪಕ್ಷದ ಅಧ್ಯಕ್ಷರು, ಮೋದಿ ಪ್ರಧಾನಿಯಾಗಿದ್ದರು, ಇವರ ಮೇಲೆ ಯಾವುದಾದರೂ ಶಿಸ್ತಿನ ಕ್ರಮ ತೆಗೆದುಕೊಂಡರಾ? ಇದರ ಅರ್ಥ ಏನು? ಮೋದಿ ಮತ್ತು ಅಮಿತ್‌ ಶಾ ಅವರೇ ಅನಂತ ಕುಮಾರ್‌ ಹೆಗ್ಡೆ ಅವರ ಕೈಲಿ ಹೇಳಿಸಿದ್ದು, ಇಲ್ಲದಿದ್ರೆ ಅವರನ್ನು ಪಕ್ಷದಿಂದ ವಜಾ ಮಾಡಬೇಕಿತ್ತು ಅಂತಲ್ಲವಾ?

ಹೊನ್ನಾವರದ ಪರೇಶ್‌ ಮೇಸ್ತಾ ಎಂಬ ಯುವಕ ಸತ್ತಾಗ ಕಾಂಗ್ರೆಸ್‌ ನವರೇ ಕೊಲೆ ಮಾಡಿಸಿದ್ದು ಎಂದು ಅನಂತ ಕುಮಾರ್‌ ಹೆಗ್ಡೆ ಅಪಪ್ರಚಾರ ಮಾಡಿದರು. ಆ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ, ಆಗ ಕೇಂದ್ರದಲ್ಲಿ ನಮ್ಮ ಸರ್ಕಾರ ಇರಲಿಲ್ಲ. ಈಗ ಸಿಬಿಐ ವರದಿಯಲ್ಲಿ ಪರೇಶ್‌ ಮೇಸ್ತಾನದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ಬಂದಿದೆ. ಈಗ ಅನಂತ್‌ ಕುಮಾರ್‌ ಹೆಗ್ಡೆ ಏನ್‌ ಹೇಳ್ತಾರೆ? ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ಹೀಗೆ ಅನೇಕ ಸಾವುಗಳನ್ನು ಕೊಲೆಗಳು ಎಂದು ಬೇರೆಯವರ ಮೇಲೆ ಎತ್ತುಕಟ್ಟುವ ಕೆಲಸವನ್ನು ಜಿಲ್ಲೆಯಲ್ಲಿ ಮಾಡಿದ್ದಾರೆ ಎಂದರು.

ಬಸವರಾಜ ಬೊಮ್ಮಾಯಿ ಆರ್‌,ಎಸ್‌,ಎಸ್‌ ಗೆ ಮಾತ್ರ ಮುಖ್ಯಮಂತ್ರಿ ಅಲ್ಲ, 7 ಕೋಟಿ ಕನ್ನಡಿಗರಿಗೆ ಮುಖ್ಯಮಂತ್ರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗಳು ನಡೆದಾಗ ಒಂದು ಕಡೆ ಶವ ನೋಡಲು ಹೋಗಿ, ಅವರಿಗೆ ಪರಿಹಾರ ನೀಡುತ್ತಾರೆ, ಇನ್ನೊಂದು ಕಡೆ ಅಲ್ಪಸಂಖ್ಯಾತರ ಕೊಲೆ ಆಗಿದ್ದಲ್ಲಿ ನೋಡಲೂ ಹೋಗಿಲ್ಲ, ಪರಿಹಾರವನ್ನೂ ನೀಡಿಲ್ಲ. ಸರ್ಕಾರದ ಖಜಾನೆ ಯಾರಪ್ಪನ ಮನೆಯ ದುಡ್ಡಲ್ಲ. ಜನರ ತೆರಿಗೆ ಹಣ. ಬೊಮ್ಮಾಯಿ ಅವರು ಆರ್‌,ಎಸ್‌,ಎಸ್‌ ನವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಗುಡುಗಿದರು.

ದೇಶಭಕ್ತಿ ಬಗ್ಗೆ ಭಾರೀ ಮಾತನಾಡುವ ಆರ್‌,ಎಸ್‌,ಎಸ್‌ ನವರ ನಿಜ ಇತಿಹಾಸ ಎಲ್ಲರೂ ತಿಳಿದಿರಬೇಕು. 1925ರಲ್ಲಿ ಸ್ಥಾಪನೆಯಾದ ಆರ್‌,ಎಸ್‌,ಎಸ್‌ ಮುಖಂಡರಲ್ಲಿ ಒಬ್ಬರಾದ್ರೂ ದೇಶಕ್ಕಾಗಿ ಜೈಲಿಗೆ ಹೋಗಿದ್ದಾರ? ಸತ್ತಿದ್ದಾರ? ತ್ಯಾಗ ಬಲಿದಾನ ಮಾಡಿದ್ದಾರ? ಇಂಥವರು ಕಾಂಗ್ರೆಸ್‌ ಗೆ ದೇಶಭಕ್ತಿಯ ಪಾಠ ಮಾಡುವುದು ಹಾಸ್ಯಾಸ್ಪದ. ಇಂದು ನಾವು ನೀವೆಲ್ಲಾ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಾ ಇದ್ದರೆ ಅದಕ್ಕೆ ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಹೋರಾಟ ಮಾಡಿದ ಕಾಂಗ್ರೆಸ್‌ ಪಕ್ಷ ಕಾರಣ. ಬಿಜೆಪಿಗೆ ದೇಶಭಕ್ತಿಯ ಬಗ್ಗೆ ಮಾತನಾಡುವ ಯಾವ ನೈತಿಕತೆ ಇಲ್ಲ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಂವಿಧಾನ ರಚನೆ ವರೆಗೆ ಬಿಜೆಪಿಯ ಕೊಡುಗೆ ಶೂನ್ಯ ಎಂದು ಅವರು ವಾಗ್ದಾಳಿ ನಡೆಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ