ಸಿದ್ದರಾಮಯ್ಯ ಮನೆಗೆ ಬಂದ ಸೊಸೆಯಂತೆ, ಕೀಲಿ ಕೈ ಅವರ ಕೈಗೆ ಹೋಗಿದೆ-ಸಿಎಂ ಇಬ್ರಾಹಿಂ
ಬೆಂಗಳೂರು: ಎಂತಹ ಗಂಭೀರ ವಿಚಾರಗಳಿದ್ದರೂ ಕಾಂಗ್ರೆಸ್ ನ ಹಿರಿಯ ನಾಯಕ ಸಿಎಂ ಇಬ್ರಾಹಿಂ ಅದನ್ನು ಬಹಳ ವ್ಯಂಗ್ಯವಾಗಿ ಜನರಿಗೆ ಅರ್ಥ ಮಾಡಿಸುವುದರಲ್ಲಿ ನಿಸ್ಸೀಮರು. ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಎಂಬ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ. ಮೂಲ, ವಲಸಿಗೆ ಎಂಬೆಲ್ಲ ಚರ್ಚೆಗಳನ್ನು ಸಿಎಂ ಇಬ್ರಾಹಿಂ ವಿಶೇಷವಾಗಿ ವಿವರಿಸಿದ್ದಾರೆ.
ಮನೆಗೆ ಬರುವಾಗ ಸೊಸೆ ಹೊಸದಾಗಿಯೇ ಬರುವುದು. ಹಾಗಂತ ಆಕೆಯನ್ನು ನೀನು ವಲಸೆ ಬಂದವಳು ಎಂದು ಹೇಳಲು ಆಗುತ್ತದೆಯೇ? ಸ್ವಲ್ಪ ದಿನವಾದ ಬಳಿಕ ಕೀಲಿಕೈ ಸೊಸೆಯ ಕೈಗೆ ಹೋಗುತ್ತದೆ. ಈಗ ಸಿದ್ದರಾಮಯ್ಯ ಕೈಗೆ ಕೀಲಿ ಕೈ ಸಿಕ್ಕಿದೆ ಹಾಗಾಗಿ ವಲಸಿಗ, ಹೊಸಬ ಎಂಬಂತಹ ಬೇಧ ಭಾವ ಇಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿದ್ದು ಯಾರು? ಬಳ್ಳಾರಿ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯನವರನ್ನು ಮುಂದೆ ತಂದವರು ಯಾರು? ಇಂತಹವನೊಬ್ಬ ಇದ್ದಾನೆ ಅಂತ ಹೇಳಿದ್ದೇ ನಾವು. ಸಿದ್ದರಾಮಯ್ಯಗೆ ಮೇಕಪ್ ಮಾಡಿದವರೇ ನಾವು. ಹೀರೋ ಇದ್ದರೂ ಹಿನ್ನೆಲೆ ಗಾಯಕ ಯಾರು? ಕ್ಯಾಸೆಟ್ ತೆಗೆದು ನೋಡಿ. ಹಿನ್ನೆಲೆ ಗಾಯಕ ಯಾವತ್ತೂ ಕಾಣಲ್ಲ ಎಂದು ಅವರು ಹೇಳಿದರು.
ಒಂದು ರೂ. ಅಕ್ಕಿ, ಮಧ್ಯಾಹ್ನದ ಊಟ ತಂದವರು ಯಾರು? ತಮಿಳುನಾಡಿನಲ್ಲಿ ಎರಡು ದಿನ ಕುಳಿತು ನಾನು ಅಧ್ಯಯನ ಮಾಡಿ ಆ ಯೋಜನೆ ಕೊಟ್ಟಿದ್ದೆ. ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಯೋಜನೆ ಕೊಟ್ಟೆ. ಆ ಯೋಜನೆ ಯಶಸ್ವಿಯಾಯಿತು ಎಂದು ಸಿದ್ದರಾಮಯ್ಯ ಸಾಧನೆಯ ಹಿಂದೆ ತನ್ನ ಕೆಲಸದ ಬಗ್ಗೆ ಹೇಳಿದರು.