ಸಿದ್ದರಾಮಯ್ಯ ಕೊಟ್ಟಿರೋದನ್ನು ಯಡಿಯೂರಪ್ಪ ಕಿತ್ಕೊಂಡ್ರು!
ಬೆಂಗಳೂರು: ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಿದ್ದು, ಏಪ್ರಿಲ್ ನಲ್ಲಿ ಮತ್ತೊಮ್ಮೆ 3 ಕೆಜಿ ಅಕ್ಕಿ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದು ರಾಜ್ಯದ ಬಡ ಜನರಿಗೆ ದೊಡ್ಡ ಹೊಡೆತ.
ಅನ್ನಭಾಗ್ಯ ಯೋಜನೆಯಡಿ 3 ಕೆಜಿ ಅಕ್ಕಿ ಕಡಿತ ಮಾಡಿ ಅಕ್ಕಿ ಬದಲಿಗೆ ರಾಗಿ ನೀಡುವ ಯೋಜನೆ ಜಾರಿಗೊಳಿಸಲು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದ್ದು, ಏಪ್ರಿಲ್ ನಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಗ್ರಾಹಕರ ಅನ್ನಭಾಗ್ಯ ಯೋಜನೆಯಡಿ ಅಕ್ಕಿಗೆ ಕತ್ತರಿ ಬೀಳಲಿದ್ದು, ಪ್ರತಿ ಸದಸ್ಯರಿಗೆ 2 ಕೆಜಿ ಅಕ್ಕಿ ಲಭಿಸಲಿದೆ. ಕಡಿತಗೊಂಡಿರುವ ಅಕ್ಕಿ ಬದಲಾಗಿ 3 ಕೆಜಿ ರಾಗಿ ಸಿಗಲಿದೆ ಎನ್ನಲಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರಿಗೆ ತಲಾ 2 ಕೆಜಿ ಅಕ್ಕಿ, 3 ಕೆಜಿ ರಾಗಿ ಹಾಗೂ 1 ಪಡಿತರ ಚೀಟಿಗೆ 2 ಕೆಜಿ ಗೋಧಿ ವಿತರಿಸಲು ಯೋಜನೆ ರೂಪಿಸಲಾಗಿದೆ. ಅಂತ್ಯೋದಯ ಪಡಿತರ ಚೀಟಿಗೆ 15ಕೆಜಿ ಅಕ್ಕಿ ಹಾಗೂ 20 ಕೆಜಿ ರಾಗಿ ದೊರೆಯಲಿದೆ. ಎಪಿಎಲ್ ಕಾರ್ಡ್ ಗ್ರಾಹಕರಿಗೆ 5 ಕೆಜಿ ಅಕ್ಕಿ, ಒಂದಕ್ಕಿಂತ ಹೆಚ್ಚು ಸದಸ್ಯರು ಇದ್ದರೆ 10 ಕೆಜಿ ಅಕ್ಕಿ ವಿತರಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಬಡ ಜನರಿಗೆ ಯಡಿಯೂರಪ್ಪ ಸರ್ಕಾರ ಹೆಚ್ಚುವರಿ ಏನೂ ನೀಡುವುದು ಬೇಡ. ಕನಿಷ್ಠ ಪಕ್ಷ ಸಿದ್ದರಾಮಯ್ಯ ಸರ್ಕಾರ ನೀಡುತ್ತಿದ್ದಷ್ಟು ಅಕ್ಕಿಯನ್ನಾದರೂ ನೀಡಬಹುದಿತ್ತು. ಈ ಅಕ್ಕಿಯನ್ನು ನಂಬಿಕೊಂಡು ಎಷ್ಟೋ ಜನರು ಬದುಕುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿರುವ ಹಸಿವು ಅಂದ್ರೆ ಏನು ಎಂದು ತಿಳಿಯದಿರುವವರು ಇಂತಹ ಆಲೋಚನೆಗಳನ್ನು ಸಿಎಂ ತಲೆಗೆ ತುಂಬಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.