ನನಗೆ ಯಾವ ಉತ್ಸವವವೂ ಬೇಡ: ಸಿದ್ದರಾಮೋತ್ಸವಕ್ಕೆ ಪರೋಕ್ಷ ವಿರೋಧ ತೋರಿದ್ರಾ ಡಿಕೆಶಿ!?
ಬೆಂಗಳೂರು: ನನಗೆ ಯಾವ ಉತ್ಸವವೂ ಬೇಡ, ನನಗೆ ಕಾಂಗ್ರೆಸ್ ಹಾಗೂ ದೇಶದ ಉತ್ಸವ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಇದೀಗ ವಿವಿಧ ಅರ್ಥಗಳನ್ನು ಪಡೆದುಕೊಂಡಿದೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಭಿಮಾನಿಗಳು ಅಭಿಮಾನದಿಂದ ಏನು ಮಾತನಾಡುತ್ತಾರೋ ಅದು ನನಗೆ ಬೇಡ. ನನ್ನ ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳು ಜಾಹೀರಾತು ನೀಡುತ್ತೇವೆ ಎಂದಾಗಲೂ ಬೇಡ ಎಂದಿದ್ದೆ. ನನ್ನ ಕುಟುಂಬದ ಸಮೇತ ಕೇದಾರನಾಥಕ್ಕೆ ಹೋಗಿ ಅಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಬಂದೆ. ಬೇರೆಯವರ ಹೇಳಿಕೆ ಅಭಿಮಾನದ ವಿಚಾರ ಅಷ್ಟೆ ಎಂದಿದ್ದಾರೆ.
ನನಗೆ ಯಾವ ಉತ್ಸವವೂ ಬೇಡ. ನನಗೆ ಕಾಂಗ್ರೆಸ್ ಹಾಗೂ ದೇಶದ ಉತ್ಸವ ಬೇಕು. ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಅದೇ ನನ್ನ ಗುರಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಾನು ಅಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡ ದಿನವೇ, ಯಾರೂ ಕೂಡ ನನ್ನ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಎಂದು ಹೇಳಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಅಭಿಮಾನಿಗಳು ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಈ ವಿಚಾರ ವಿರೋಧ ಪಕ್ಷಗಳಿಗೆ ಆಹಾರವಾಗುವುದಿಲ್ಲವೆ ಎಂಬ ಪ್ರಶ್ನೆಗೆ, ಮಾಧ್ಯಮಗಳಿಗೂ ಇದೇ ಆಹಾರ ಬೇಕು. ಅದಕ್ಕಾಗಿ ನನ್ನನ್ನು ಬಂದು ಈ ವಿಚಾರವಾಗಿ ಕೇಳುತ್ತಿದ್ದೀರಿ ಎಂದು ಮಾಧ್ಯಮಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುತ್ತೀರಾ ಎಂಬ ಪ್ರಶ್ನೆಗೆ, ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ನಾನು ಈ ಸಭೆಯಲ್ಲಿ ಭಾಗವಹಿಸುವುದಿಲ್ಲ. ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ನನನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ನಾನು ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಇಂದು ಕಾಂಗ್ರೆಸ್ ಕಚೇರಿಯಲ್ಲಿ ದೇಶದ 75ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆ ನಡೆಸುತ್ತಿದ್ದು, ಅಲ್ಲಿಗೆ ಹೋಗುತ್ತೇನೆ ಎಂದು ಉತ್ತರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka