ನಮಗೆ ಹಣ ಬೇಡ ನ್ಯಾಯ ಬೇಕು: ಸಿದ್ದರಾಮಯ್ಯ ಕೊಟ್ಟ ಹಣ ಎಸೆದ ಮಹಿಳೆ
ಬಾಗಲಕೋಟೆ: ಕೆರೂರು ಘರ್ಷಣೆ ಗಾಯಾಳುಗಳಿಗೆ ಸಾಂತ್ವನ ಹೇಳಲು ಹೋದ ಸಿದ್ದರಾಮಯ್ಯ ಸಂತ್ರಸ್ತರಿಗೆ ನೀಡಿದ ಹಣವನ್ನು ಮುಸ್ಲಿಮ್ ಮಹಿಳೆಯೊಬ್ಬರು ಸಿದ್ದರಾಮಯ್ಯ ಎದುರೇ ಕಾರಿನೊಳಗೆ ಎಸೆದ ಘಟನೆ ನಡೆದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆರೂರು ಘರ್ಷಣೆ ಗಾಯಾಳುಗಳಿಗೆ ಸಾಂತ್ವನ ಹೇಳಿ, ಪರಿಹಾರ ನೀಡಲು ತೆರಳಿದ್ದರು. ಈ ವೇಳೆ ಗಾಯಾಳುಗಳ ಕುಟುಂಬಸ್ಥರು ಪರಿಹಾರದ ಹಣ ಪಡೆಯಲು ನಿರಾಕರಿಸಿದ್ದು, ಸಿದ್ದರಾಮಯ್ಯನವರ ಕಾರಿಗೆ ಹಣ ವಾಪಸ್ ಎಸೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಜುಲೈ 6ರಂದು ಕ್ಷುಲ್ಲಕ ಕಾರಣಕ್ಕೆ ಹಿಂದೂ-ಮುಸ್ಲಿಂ ಕೋಮಿನ ಜನರ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಮನಿ ಸೇರಿ ನಾಲ್ವರಿಗೆ ಚಾಕುವಿನಿಂದ ಇರಿಯಲಾಗಿತ್ತು. ಘರ್ಷಣೆ ಬಳಿಕ ಮನೆಯ ಮೇಲೆ ದಾಳಿ ಹಾಗೂ ಜುಲೈ 8ರಂದು ಡಾಬಾ ಮೇಲೆ ದಾಳಿ ನಡೆದು ಮಾರಣಾಂತಿಕ ಹಲ್ಲೆ ನಡೆದಿತ್ತು. ಇದರಲ್ಲಿ ಐವರು ಮುಸ್ಲಿಮರು ಗಾಯಗೊಂಡಿದ್ದರು. ಬಾಗಲಕೋಟೆ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಎರಡು ಗುಂಪಿನ ಗಾಯಾಳುಗಳ ಭೇಟಿಗೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ತೆರಳಿದ್ದರು.
ಗಾಯಾಳುಗಳಾದ ಮಹಮ್ಮದ್ ಹನಿಫ್, ದಾವಲ್ ಮಲಿಕ್, ರಾಜೇಸಾಬ್, ರಫಿಕ್ ಆರೋಗ್ಯ ವಿಚಾರಿಸಿದರು. ಬಳಿಕ ಗಾಯಾಳುಗಳಿಗೆ 2 ಲಕ್ಷ ರೂ. ಕೊಟ್ಟು ಬರುತ್ತಿದ್ದರು. ಈ ವೇಳೆ ಮುಸ್ಲಿಂ ಮಹಿಳೆ 2 ಲಕ್ಷ ರೂ. ಹಣವನ್ನು ಸಿದ್ದರಾಮಯ್ಯ ಕಾರಿಗೆ ಎಸೆದಿದ್ದಾರೆ.
ದುಡ್ಡು ಬೇಡ, ನಮಗೆ ನ್ಯಾಯ ಬೇಕು!
ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಮಹಿಳೆ ರಾಜ್ಮ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಇಲ್ಲಿಯವರೆಗೂ ಯಾರು ಬಂದಿಲ್ಲ. ಈಗ ಸಿದ್ದರಾಮಯ್ಯ ಬಂದಿದ್ದಾರೆ. ಆದರೆ, ವೋಟ್ ಕೇಳಬೇಕಾದರೆ ಜಾತಿ-ಗೀತಿ ಏನೂ ಕೇಳುವುದಿಲ್ಲ. ಅಮ್ಮ ಕೈ ಮುಗಿತ್ತೀನಿ ವೋಟ್ ಹಾಕಿ ಎಂದು ಕೇಳಿಕೊಳ್ಳುತ್ತಾರೆ. ನಾವು ವೋಟ್ ಹಾಕಿದರೆ ತಾನೇ ಅವರು ಅಧಿಕಾರಕ್ಕೆ ಬರುತ್ತಾರೆ. ನಮಗೂ ನ್ಯಾಯ ಬೇಕು, ಹಿಂದೂಗಳಿಗೂ ನ್ಯಾಯ ಬೇಕು ಎಂದರು.
ಎಲ್ಲರೂ ಒಂದೇ ತಾಯಿ ಮಕ್ಕಳ ರೀತಿ ನಡೆದುಕೊಳ್ಳಬೇಕು. ಹೊಟ್ಟೆ ಹಸಿದಿದೆ ಎಂದು ಭಿಕ್ಷೆ ಬೇಡಿದ್ರೆ ಹೊಟ್ಟೆ ತುಂಬ ರೊಟ್ಟಿ ಕೊಡುತ್ತಾರೆ. ಯಾರಾದ್ರೂ ಬಡೀತರೆ ಎಂದರೆ ಯಾರು ಯಾರಿಗೂ ಸಾಥ್ ಮಾಡುವುದಿಲ್ಲ. ನಮಗೆ ಆ ಕಷ್ಟ ಗೊತ್ತಿದೆ. ನಾವು ನಮ್ಮ ಮಕ್ಕಳ ಮುಖ ನೋಡಿ 8-10 ದಿನವಾಗಿದೆ ಎಂದು ಅಳಲು ತೋಡಿಕೊಂಡರು.
ನಮಗೆ ಆದ ಘಟನೆ ಯಾವ ಅಣ್ಣ-ತಮ್ಮ, ಹಿಂದೂ-ಮುಸ್ಲಿಮರಿಗೂ ಆಗಬಾರದು. ಇದಕ್ಕೆ ಕಾರಣವಾದರಿಗೆ ಮಾತ್ರ ಶಿಕ್ಷೆಯಾಗಬೇಕು. ಪರಿಹಾರ ಕೊಟ್ಟಿದ್ದಾರೆ. ಇಂದು ಕೊಡುತ್ತಾರೆ. ಆದರೆ, ನನ್ನ ಗಂಡ ಒಂದು ವರ್ಷಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕು. ಅಳುವವರು ಒಂದು ದಿನ ಅಳುತ್ತಾರೆ. ದಿನ ಯಾರು ಅಳುವುದಿಲ್ಲ. ನಮಗೆ ಹೊಟ್ಟೆಗೆ ಬೇಕು ಎಂದರೆ ಹಿಂದೂಗಳಾದರೂ ನಮಗೆ ಊಟ ಕೊಡುತ್ತಾರೆ. ಹೊಟ್ಟೆ ಹಸಿದಿದೆ ಎಂದರೆ ಭಿಕ್ಷೆ ಬೇಡಿದ್ರೆ ಹೊಟ್ಟೆ ತುಂಬ ರೊಟ್ಟಿ ಕೊಡುತ್ತಾರೆ. ನಮಗೆ ಯಾರ ಪರಿಹಾರವೂ ಬೇಡ. ಈ ರೀತಿಯ ಗಲಭೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಭೇಟಿಗೆ ನಿರಾಕರಿಸಿದ ಹಿಂದೂ ಸಂಘಟನೆಯ ಗಾಯಾಳುಗಳು!
ಕೆರೂರು ಘರ್ಷಣೆಯಲ್ಲಿ ಗಾಯಗೊಂಡ ಹಿಂದೂ ಸಂಘಟನೆಯ ಗಾಯಾಳುಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯನ್ನು ನಿರಾಕರಿಸಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ಆಸ್ಪತ್ರೆ ಭೇಟಿ ರದ್ದುಗೊಳಿಸಿದ್ದಾರೆ.
ಹಿಂದೂ ಸಂಘಟನೆಯ ಗಾಯಾಳುಗಳು ಸಿದ್ದರಾಮಯ್ಯ ತಮ್ಮ ಭೇಟಿಗೆ ಬರುವುದು ಬೇಡ ಎಂದು ಬಾಗಲಕೋಟೆ ಎಸ್ ಪಿಗೆ ಫೋನ್ ಮಾಡಿದ್ದರು. ಹೀಗಾಗಿ, ಕೊನೆ ಕ್ಷಣದಲ್ಲಿ ಆಸ್ಪತ್ರೆ ಭೇಟಿ ರದ್ದಾಗಿದೆ ಎನ್ನಲಾಗಿದೆ.
ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲ
ಯಾರು ಶಾಂತಿ ಕದಡುತ್ತಿದ್ದಾರೋ ಅವರು ಗಮನಿಸಬೇಕು. ರಾಜ್ಯದಲ್ಲಿ ಶಾಂತಿ ವಿಚಾರದ ಬಗ್ಗೆ ಸಿಎಂ ಅವರನ್ನು ಪ್ರಶ್ನಿಸಿ. ʻಈಗ ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲʼ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಘಟನೆ ಬೆನ್ನಲ್ಲೇ ಸಿದ್ದರಾಮಯ್ಯ ಟ್ವೀಟ್!
ಗಲಭೆಯಲ್ಲಿ ಗಾಯಗೊಂಡವರ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ರೂಪದಲ್ಲಿ ಒಂದಷ್ಟು ಹಣ ನೀಡಿದ್ದೆ. ಹಣ ಬೇಡ, ನ್ಯಾಯ ಕೊಡಿ ಎಂದು ನೊಂದ ಕುಟುಂಬದವರು ಕೇಳಿದ್ದಾರೆ. ಅವರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿನ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟುಹೋಗುತ್ತಿದ್ದು ಅನ್ಯಾಯ-ದೌರ್ಜನ್ಯಗಳಿಗೆ ಬಲಿಯಾಗಿರುವ ಜನರು ಪೊಲೀಸರ ನಿಷ್ಕ್ರೀಯತೆಯಿಂದಾಗಿ ಹತಾಶರಾಗಿದ್ದಾರೆ. ಅಸಮರ್ಥ ಗೃಹಸಚಿವರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಪೊಲೀಸ್ ಇಲಾಖೆ ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿದೆ ಎಂದು ಟೀಕಿಸಿದರು.
ಉದ್ರಿಕ್ತ ಸ್ಥಿತಿಯಲ್ಲಿ ಭೇಟಿ ನೀಡುವುದು ಸೂಕ್ತ ಅಲ್ಲವೆಂದು ತಿಳಿದು ಕೆಲವು ದಿನಗಳ ನಂತರ ಇಂದು ಬಂದು ಎರಡೂ ಗುಂಪಿನವರನ್ನು ಭೇಟಿ ಮಾಡಿದೆ. ಇಂತಹ ಘಟನೆಗಳಲ್ಲಿ ಅನವಶ್ಯಕವಾಗಿ ಪ್ರಚೋದನೆ ನೀಡಿ ಶಾಂತಿ-ಸೌಹಾರ್ದತೆ ಕೆಡಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka