ಸಿಡಿಲು ಸಹಿತ ಭಾರೀ ಮಳೆ ರಾಜ್ಯದಲ್ಲಿ 7 ಮಂದಿ ಸಿಡಿಲಿಗೆ ಬಲಿ
ಬೆಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿ ಇಂದು ಭಾರೀ ಮಳೆಯಾಗಿದ್ದು, ಸಂಜೆಯ ವೇಳೆಗೆ ಆರಂಭವಾದ ಗುಡುಗು ಸಹಿತ ಭಾರೀ ಮಳೆಗೆ ಪ್ರಾಣ ಹಾನಿ ಕೂಡ ಆಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ.
ಯಾದಗಿರಿ, ವಿಜಯನಗರ, ದಾವಣಗೆರೆಯಲ್ಲಿ ಪ್ರಾಣ ಹಾನಿಯಾಗಿದ್ದು, ಒಟ್ಟು 7 ಮಂದಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇಂದು ಮೋಡ ಕವಿದ ವಾತಾವರಣ ಇತ್ತು. ಸಂಜೆಯ ವೇಳೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ.
ಯಾದಗಿರಿಯಲ್ಲಿ ಜಮೀನಿಗೆ ಕೆಲಸಕ್ಕೆಂದು ತೆರಳಿದ್ದ 40 ವರ್ಷ ವಯಸ್ಸಿನ ಸಿದ್ದಮ್ಮ ಎಂಬವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ 33 ವರ್ಷ ವಯಸ್ಸಿನ ರಾಜಶೇಖರ 40 ವರ್ಷದ ಚಿನ್ನಾಪುರಿ, 50 ವರ್ಷದ ವೀರಣ್ಣ, 43 ವರ್ಷದ ಪತ್ರೆಪ್ಪ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಇನ್ನೂ ದಾವಣಗೆರೆಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, 32 ವರ್ಷ ವಯಸ್ಸಿನ ರವಿಕುಮಾರ್ 30 ವರ್ಷ ವಯಸ್ಸಿನ ರಮೇಶ್ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಆರಂಭದ ಮಳೆಯಲ್ಲಿ ಸಿಡಿಲು ಬಡಿತಕ್ಕೆ ಹೆಚ್ಚಿನ ಪ್ರಾಣ ಹಾನಿ ಸಂಭವಿಸುತ್ತಿವೆ. ಸಾರ್ವಜನಿಕರು ಆದಷ್ಟು ಎಚ್ಚರವಹಿಸುವುದು ಉತ್ತಮ.