ಸಿಕ್ಕಿ ಬಿದ್ದು ಕೆಟ್ಟವನಾದ ಸಾಹುಕಾರ; ಸಿಕ್ಕಿ ಬೀಳದ ಮರ್ಯದಾ ಪುರುಷೋತ್ತಮರ ಕಥೆ ಏನು?
ಬೆಂಗಳೂರು: ರಮೇಶ್ ಜಾರಕಿಹೊಳಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ರಮೇಶ್ ಜಾರಕಿಹೊಳಿ ಅವರ ವೈಯಕ್ತಿಕ ವಿಚಾರಗಳು ಬೀದಿಗೆ ಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವಿಡಿಯೋಗಳು ಹರಿದಾಡುತ್ತಿವೆ. ಟ್ರೋಲ್ ಗಳು ಸೃಷ್ಟಿಯಾಗಿವೆ.
ರಮೇಶ್ ಜಾರಕಿಹೊಳಿ ಅವರ ಸಿಡಿ ವಿಚಾರ ಈ ಹಿಂದೆಯೂ ಒಂದು ಬಾರಿ ಸದ್ದು ಮಾಡಿತ್ತು. ಉಪಚುನಾವಣೆಯಲ್ಲಿ ಸದ್ದು ಮಾಡಿದ್ದ ಆ ವಿಚಾರ ಯಾಕೋ ಅಲ್ಲಿಯೇ ನಿಂತಿತ್ತು. ಆ ಬಳಿಕ ಇದೀಗ ಮತ್ತೆ ಸಿಡಿ ಬಿಡುಗಡೆಯಾಗಿದೆ. ಸಿಕ್ಕಿ ಬೀಳುವವರೆಗೂ ಸಾಹುಕಾರನಾಗಿದ್ದ ರಮೇಶ್ ಜಾರಕಿಹೊಳಿ ಇದೀಗ ಕಾಮುಕ ಸಚಿವ ಎಂದು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಗಮನಿಸಬಹುದು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲವು ಹಾಲಿ ಸಂಸದರ ಸಿಡಿಗಳ ಬಗ್ಗೆಯೂ ಮಾತುಗಳು ಕೇಳಿ ಬಂದಿದ್ದವು. ಕರಾವಳಿ ಭಾಗದ ಶಾಸಕರೊಬ್ಬರು ತಮ್ಮ ಅಶ್ಲೀಲ ಚಿತ್ರಗಳನ್ನು ಮಾಧ್ಯಮಗಳು ಪ್ರಕಟಿಸಬಾರದು ಎಂದು ವಿಡಿಯೋ ವೈರಲ್ ಆಗುವುದಕ್ಕೂ ಮೊದಲೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ಮಾಡಿಸಿರುವುದು ಗಮನಿಸಬಹುದು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರು ಭಾಗದ ಸಂಸದರೋರ್ವರ ಬಗ್ಗೆ ಬಹಷ್ಟು ಚರ್ಚೆಗಳು ನಡೆದು ಕೊನೆಗೆ ಠುಸ್ಸಾಗಿತ್ತು.
ಯಾರೆಲ್ಲ ಪ್ರಭಾವಿಗಳಿದ್ದಾರೋ, ಜಾತಿಯಲ್ಲಿ ಮೇಲ್ವರ್ಗದವರು ಅನ್ನಿಸಿಕೊಳ್ಳುತ್ತಾರೋ ಅವರ ವಿಡಿಯೋಗಳು ಮಾಧ್ಯಮಗಳಲ್ಲಿ ಬಿತ್ತರವಾಗಲಿಲ್ಲ. ಆದರೆ, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಮೊದಲಾದವರ ವಿಡಿಯೋಗಳು ಮಾಧ್ಯಮಗಳಲ್ಲಿ ವೈರಲ್ ಆದವು. ನೀಚ ಕೃತ್ಯ ಎಂದು ಮಾಧ್ಯಮಗಳಲ್ಇ ಬೊಬ್ಬಿಡಲಾಯಿತು.
ರಮೇಶ್ ಜಾರಕಿಹೊಳಿ ಟ್ರಾಪ್ ಆಗಿದ್ದಾರೆ ಎನ್ನುವುದು ಸ್ಪಷ್ಟ. ಅವರು ಮಾಡಿರುವ ಕೃತ್ಯವನ್ನು ಯಾರು ಕೂಡ ಸರಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ರಮೇಶ್ ಜಾರಕಿಹೊಳಿ ಮಾತ್ರವೇ ಹೆಣ್ಣು ಮಕ್ಕಳಿಗೆ ಆಸೆ ತೋರಿಸಿ, ತನ್ನ ಆಸೆ ಪೂರೈಸಿಕೊಂಡಿದ್ದಾರೆ ಎನ್ನುವುದು ಭ್ರಮೆ ಅಷ್ಟೆ. ರಮೇಶ್ ಜಾರಕಿಹೊಳಿ ತಪ್ಪು ಮಾಡಿ ಸಿಕ್ಕಿ ಬಿದ್ದಿರುವುದರಿಂದ ಕೆಟ್ಟ ವ್ಯಕ್ತಿ. ಆದರೆ ತಪ್ಪು ಮಾಡಿಯೂ ಅದನ್ನು ಮುಚ್ಚಿಟ್ಟು ಹಾಯಾಗಿ ತಿರುಗಾಡುತ್ತಿರುವವರು ಮಾತ್ರ ಮರ್ಯದಾ ಪುರುಷೋತ್ತಮರು. ಆದರೆ ಸತ್ಯ ಎನ್ನುವುದು ಕೆಂಡವಿದ್ದಂತೆ. ಎಲ್ಲರ ಬಂಡವಾಳ ಖಂಡಿತಾ ಹೊರಬರುತ್ತದೆ. ಇಂತಹ ನೀಚ ರಾಜಕಾರಣ ರಾಜ್ಯದಿಂದ ತೊಲಗಬೇಕು ಅಷ್ಟೆ.