ಅಲೋಪತಿ ಪದ್ಧತಿಯ ಅವಹೇಳನ: ಅಂದು ಸಿಂಹದಂತೆ ಗುಡುಗಿದ್ದ ಬಾಬಾ ರಾಮ್ ದೇವ್ ಈಗ ಮಾಡಿದ್ದೇನು?
ನವದೆಹಲಿ: ಅಲೋಪತಿ ವೈದ್ಯಕೀಯ ಪದ್ಧತಿಯ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್, ಇದೀಗ ತನ್ನ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಬೆನ್ನಲ್ಲೇ ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಕೊವಿಡ್ 19 ಚಿಕಿತ್ಸೆಯಲ್ಲಿ ಆಲೋಪತಿ ಪರಿಣಾಮಕಾರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಬಾಬಾ ರಾಮ್ ದೇವ್ ವಿರುದ್ಧ ನಾನಾ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ವಿಚಾರಣೆಗೆ ತಡೆ ನೀಡಬೇಕು ಎಂದು ಅವರು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಇನ್ನೂ ಭಾರತೀಯ ವೈದ್ಯಕೀಯ ಸಂಘ ಪಾಟ್ನಾ ಮತ್ತು ರಾಯ್ ಪುರ ಶಾಖೆಗಳು ದಾಖಲಿಸಿರುವ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ತನ್ನ ವಿರುದ್ಧ ಈ ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಯೋಗಗುರು ಮನವಿ ಮಾಡಿದ್ದಾರೆ.
ತಮ್ಮ ಹೇಳಿಕೆಯ ಸಂದರ್ಭದಲ್ಲಿ ನನ್ನ ವಿರುದ್ಧ ಕ್ರಮಕೈಗೊಳ್ಳುವವರು ಈ ಸರ್ಕಾರದಲ್ಲಿ ಯಾರೂ ಇಲ್ಲ ಎಂದು ದರ್ಪದ ಹೇಳಿಕೆಗಳನ್ನು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ವಿಚಾರಣೆ ಸಮೀಪಿಸುತ್ತಿದ್ದಂತೆಯೇ, ತನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು ಎಂದು ಬಾಬಾ ರಾಮ್ ದೇವ್ ಕೋರ್ಟ್ ಮೊರೆ ಹೋಗಿದ್ದಾರೆ.