ಗಂಭೀರ ಸ್ಥಿತಿಯಲ್ಲಿರುವ ಹಾಸ್ಯನಟ ತವಾಸಿಗೆ ನೆರವಾದ ವಿಜಯ್ ಸೇತುಪತಿ, ಶಿವಕಾರ್ತಿಕೇಯನ್ - Mahanayaka
6:05 PM Wednesday 30 - October 2024

ಗಂಭೀರ ಸ್ಥಿತಿಯಲ್ಲಿರುವ ಹಾಸ್ಯನಟ ತವಾಸಿಗೆ ನೆರವಾದ ವಿಜಯ್ ಸೇತುಪತಿ, ಶಿವಕಾರ್ತಿಕೇಯನ್

17/11/2020

ಚೆನ್ನೈ: ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ನಾಲ್ಕನೇ ಹಂತಕ್ಕೆ ತಲುಪಿರುವ  ಹಾಸ್ಯ ನಟ ಹಾಗೂ ಖಳ ನಟ ತವಾಸಿ ಅವರಿಗೆ ತಮಿಳು ಚಿತ್ರರಂಗದ ನಟರಾದ ವಿಜಯ್ ಸೇತುಪತಿ ಹಾಗೂ ಶಿವಕಾರ್ತಿಕೇಯನ್ ಸಹಾಯ ಮಾಡಿದ್ದಾರೆ.

ತವಾಸಿ ಅವರ ಅನಾರೋಗ್ಯದ ಸುದ್ದಿ ಕೇಳಿದ ತಕ್ಷಣವೇ ವಿಜಯ್ ಸೇತುಪತಿ ಹಾಗೂ ಶಿವಕಾರ್ತಿಕೇಯನ್  ಹಾಗೂ ಸೂರಿ ಸೇರಿದಂತೆ ಹಲವಾರು  ನಟರು, ತವಾಸಿ ಅವರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.  ವಿಜಯ್ ಸೇತುಪತಿ ಈಗಾಗಲೇ ಒಂದು ಲಕ್ಷ ರೂಪಾಯಿಗಳನ್ನು ತವಾಸಿ ಅವರ ಕುಟುಂಬಕ್ಕೆ ತಲುಪಿಸಿದ್ದಾರೆ. ಶಿವಕಾರ್ತಿಕೇಯನ್ ಅವರು ತಮ್ಮ ಶಿವಕಾರ್ತಿಕೇಯನ್ ಫ್ಯಾನ್ ಕ್ಲಬ್ ಮೂಲಕ ತವಾಸಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ವಿಜಯ್ ಸೇತುಪತಿ ಅವರು ಸುಂದರ್ ರಾಜಾ ಅವರ ಮೂಲಕ 1 ಲಕ್ಷ ರೂಪಾಯಿಗಳನ್ನು ತವಾಸಿ ಕುಟುಂಬಕ್ಕೆ ತಲುಪಿಸಿದ್ದಾರೆ. ಈ ಸಂದರ್ಭದಲ್ಲಿ ಸುಂದರ್ ರಾಜಾ ಕೂಡ 10 ಸಾವಿರ ರೂಪಾಯಿಗಳನ್ನು ತವಾಸಿ ಕುಟುಂಬಕ್ಕೆ ನೀಡಿದ್ದಾರೆ.

ತವಾಸಿ ಅವರು ಕ್ಯಾನ್ಸರ್ ವಿರುದ್ಧ ನಾಲ್ಕನೇ ಹಂತದ ಹೋರಾಟ ನಡೆಸುತ್ತಿದ್ದಾರೆ. ಈವರೆಗೆ ತಮ್ಮಲ್ಲಿದ್ದ ಹಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಆರ್ಥಿಕ ಸ್ಥಿತಿ ತೀರಾ ಹದಗೆಟ್ಟು ಹೋದಾಗ ಬೇರಾವುದೇ ಮಾರ್ಗವಿಲ್ಲದಾಗ ಸಹಾಯ ಕೇಳಿದ್ದಾರೆ.

ತವಾಸಿಯವರಿಗೆ ಸದ್ಯ ಊಟ ಮಾಡಲು ಮಾತ್ರವೇ ಸಾಧ್ಯವಾಗುತ್ತಿದೆ. ಉಳಿದಂತೆ ಯಾವುದೇ ಕೆಲಸಗಳನ್ನು ಅವರಿಂದ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ರೋಗದಿಂದ ಹೇಗಾದರೂ ನನ್ನನ್ನು ಪಾರು ಮಾಡಿ, ಅದಕ್ಕಾಗಿ ನನಗೆ ಸಹಾಯ ಮಾಡಿ ಎಂದು ತವಾಸಿ ಅವರು ಬೇಡಿಕೊಳ್ಳುತ್ತಿರುವ ವಿಡಿಯೋ ನೋಡಿದರೆ ಎಂತಹವರಿಗಾದರೂ ಕರುಳು ಚುರ್ ಎನಿಸದಿರದು.

ಇತ್ತೀಚಿನ ಸುದ್ದಿ