ಸ್ಮಶಾನದಲ್ಲಿ ಚಾ ತಿಂಡಿ ವ್ಯವಸ್ಥೆ | ಬಿಜೆಪಿ ನಾಯಕರ ಪ್ರಚಾರದ ಕಟೌಟ್ ವಿರುದ್ಧ ಭಾರೀ ಆಕ್ರೋಶ - Mahanayaka
2:26 PM Wednesday 5 - February 2025

ಸ್ಮಶಾನದಲ್ಲಿ ಚಾ ತಿಂಡಿ ವ್ಯವಸ್ಥೆ | ಬಿಜೆಪಿ ನಾಯಕರ ಪ್ರಚಾರದ ಕಟೌಟ್ ವಿರುದ್ಧ ಭಾರೀ ಆಕ್ರೋಶ

giddenahalli
04/05/2021

ಬೆಂಗಳೂರು: ಹಾದಿ, ಬೀದಿ, ಹಳ್ಳಿ, ದಿಲ್ಲಿ ಎಲ್ಲ ಕಡೆ ರಾಜಕೀಯ ಮಾಡಿ ಆಯಿತು. ಈಗ ಸ್ಮಶಾನದಲ್ಲಿಯೂ ರಾಜಕೀಯ ಮಾಡಲು ರಾಜಕೀಯ ನಾಯಕರು ಮುಂದಾಗಿರುವುದು ಇದೀಗ ಸಾರ್ವಜನಿಕರಿಗೆ ಅಸಹ್ಯ ತರಿಸುವಂತಾಗಿದೆ.

ಕೊವಿಡ್ ನಿಂದ ಮೃತಪಟ್ಟವರಿಗೆ ಅಂತ್ಯಸಂಸ್ಕಾರ ಮಾಡಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಹಾಕಿರುವ ಬ್ಯಾನರೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಸಾರ್ವಜನಿಕರು ಬಿಜೆಪಿ ನಾಯಕರ ಈ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊವಿಡ್ ನಿಂದ ಮೃತಪಟ್ಟವರನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ಕೆ ಉಚಿತವಾಗಿ ನೀರು, ಕಾಫಿ, ಟೀ, ತಿಂಡಿ, ಊಟದ ವ್ಯವಸ್ಥೆಯನ್ನು  ಯಲಹಂಕ ಕ್ಷೇತ್ರ ಜನಪ್ರಿಯ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಮಲ್ಲಯ್ಯನವರ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಬ್ಯಾನರ್ ನಲ್ಲಿ ಹಾಕಲಾಗಿದೆ. ಬ್ಯಾನರ್ ನಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಆರ್.ಅಶೋಕ್ ಸೇರಿದಂತೆ ಹಲವು ಸ್ಥಳೀಯ ನಾಯಕರ ಫೋಟೋಗಳನ್ನು ಹಾಕಲಾಗಿದೆ.

ಗಿಡ್ಡೇನಹಳ್ಳಿ ಸ್ಮಶಾನಕ್ಕೆ ಹೋಗುವ ದಾರಿ ಎಂಬ ನೆಪದಲ್ಲಿ ಹಾಕಿರುವ ಈ ಬ್ಯಾನರ್ ನಲ್ಲಿ ಸ್ಮಶಾನಕ್ಕೆ ಬರುವವರಿಗೆ ಟೀ, ಕಾಫಿ ಕೊಡುವ ವಿಚಾರವನ್ನೇ ಹೈಲೈಟ್ ಮಾಡಲಾಗಿದ್ದು, ಇಂತಹದ್ದೊಂದು ಪ್ರಚಾರ ಅವಶ್ಯಕತೆ ಇದೆಯೇ? ರಾಜ್ಯದಲ್ಲಿ ಜನರು ಕೊರೊನಾದಿಂದ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಪ್ರಚಾರದ ಅಗತ್ಯ ಇದೆಯೇ? ಬಿಜೆಪಿ ನಾಯಕರು ಚಾ ತಿಂಡಿಗಿಂತಲೂ ಹೆಚ್ಚು, ಬ್ಯಾನರ್ ಗೆ ಖರ್ಚು ಮಾಡಿದಂತಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ