ಗ್ರಹಣ ವೇಳೆ ಸ್ಮಶಾನದಲ್ಲಿ ಊಟ ಮಾಡಿ ಮೌಢ್ಯಕ್ಕೆ ಸೆಡ್ಡು ಹೊಡೆದ ಯುವಕರು
ಮುದ್ದೇಬಿಹಾಳ: ಚಂದ್ರಗ್ರಹಣದ ಬಗ್ಗೆ ಟಿವಿ ಚಾನೆಲ್ ಗಳೇ ಮೌಢ್ಯಾಚರಣೆಯಲ್ಲಿ ಪ್ರೋತ್ಸಾಹಿಸುತ್ತವೆ. ಅಂತಹದ್ದಲ್ಲಿ ಇಲ್ಲೊಂದು ಯುವಕರ ತಂಡ ಚಂದ್ರಗ್ರಹಣದಂದು ಸ್ಮಶಾನದಲ್ಲಿ ಊಟ ಮಾಡುವ ಮೂಲಕ ಮೌಢ್ಯ ಹಾಗೂ ಮೌಢ್ಯಕ್ಕೆ ಪ್ರೇರಣೆ ನೀಡುವವರಿಗೆ ತಿರುಗೇಟು ನೀಡಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಯುವಕರು ಈ ಕಾರ್ಯ ಮಾಡಿದ್ದು, ಪಟ್ಟಣದ ಪೊಲೀಸ್ ಠಾಣೆಯ ಹಿಂಬದಿಯ ರುದ್ರಭೂಮಿಯಲ್ಲಿ 9 ಯುವಕರು ಊಟ ಮಾಡುವ ಮೂಲಕ ಜನರಿಗೆ ವಿಶೇಷ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಯುವಕ ಮಾರುತಿ ಸಿದ್ದಾಪೂರ, ಗ್ರಹಣದ ಸಂದರ್ಭದಲ್ಲಿ ಅದು ಮಾಡಬಾರದು, ಇದು ಮಾಡಬಾರದು ಎಂದು ಕಟ್ಟಳೆಗಳನ್ನು ಹಾಕುತ್ತಿರುತ್ತಾರೆ. ಅಂತಹವರಿಗೆ ನಾವು ಸ್ಮಶಾನದಲ್ಲಿಯೇ ಊಟ ಮಾಡುವ ಮೂಲಕ ಉತ್ತರ ನೀಡಿದ್ದೇವೆ ಎಂದು ಹೇಳಿದರು.
ಮುದ್ದೆಬೀಹಾಳದಲ್ಲಿ ಚಂದ್ರಗ್ರಹಣದ ಸಂದರ್ಭದಲ್ಲಿ ಯಾರೂ ಕೂಡ ಮನೆಯಿಂದ ಹೊರಬರಬಾರದು, ಗರ್ಭಿಣೀಯರಿಗೆ ಗ್ರಹಣದಿಂದ ಅಪಾಯ ಇದೆ, ಗ್ರಹಣ ವೇಳೆ ಊಟ ಮಾಡಮಾಡಬಾರದು ಮೊದಲಾದ ಮೌಢ್ಯತೆಗಳಿವೆ. ಇವುಗಳನ್ನು ಹೋಗಲಾಡಿಸಲು ನಾವು ಸಣ್ಣ ಪ್ರಯತ್ನ ಮಾಡಿದ್ದೇವೆ ಎಂದು ಯುವಕರು ಹೇಳಿದ್ದಾರೆ.
ತಂಡದಲ್ಲಿ ಮಂಜುನಾಥ ಕಟ್ಟಿಮನಿ, ರಾಜು ಮನಸಿಬಿನಾಳ, ಬಸು ಸಿದ್ದಾಪೂರ, ಲಕ್ಷ್ಮಣ ಚಲವಾದಿ, ಪ್ರದೀಪ್ ಸಿದ್ದಾಪೂರ, ಅಯ್ಯಪ್ಪ ಸಿದ್ದಾಪೂರ, ಅಭಿಷೇಕ್ ಸಿದ್ದಾಪೂರ, ರಂಜಿತ್ ಮಸಿಬಿನಾಳ ಮೊದಲಾದವರು ಇದ್ದರು.