ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ದೊರೆಯುವುದಿಲ್ಲ: ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ಟಾಂಗ್
ಬೆಳಗಾವಿ/ನಂದಗಢ: ಕಾಂಗ್ರೆಸ್ ಸರ್ಕಾರ ಅಹಿಂದ, ಸಾಮಾಜಿಕ ನ್ಯಾಯ ಎಂದು ಹೇಳುತ್ತಾ , ತಾವು ಮಾತ್ರ ಮುಂದೆ ಬಂದರು. ಸಾಮಾಜಿಕ ನ್ಯಾಯ ಕೇವಲ ಭಾಷಣದಿಂದ ಸಿಗುವುದಿಲ್ಲ. ನಮ್ಮ ಭಾಜಪ ಸರ್ಕಾರ ದಿಟ್ಟ ನಿಲುವಿನಿಂದ ಎಸ್ ಸಿ, ಎಸ್ ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿ ಜಿಲ್ಲೆಯ ನಂದಗಢದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ರಥ ಯಾತ್ರೆಗೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಸರ್ಕಾರ ಮಾಡಿರುವ ಈ ಸಾಧನೆಯಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಸಂವಿಧಾನದ 9ನೇ ಪರಿಚ್ಛೇಧಕ್ಕೆ ಸೇರಿಸಲು ಸೂಕ್ತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ. ಇದು ನಮ್ಮ ಸರ್ಕಾರದ ಬದ್ಧತೆ. ಎಸ್ ಸಿ ಎಸ್ ಟಿ ಸಮುದಾಯಗಳನ್ನು ಮತಬ್ಯಾಂಕ್ ಮಾಡಿಕೊಂಡು ಅಧಿಕಾರಕ್ಕೆ ಬರಲು ಹುನ್ನಾರ ನಡೆಸುತ್ತಾರೆ. ಆದರೆ ಈ ಸಮಾಜಗಳು ಈಗ ಜಾಗೃತರಾಗಿವೆ ಎಂದರು.
ದ್ವೇಷದ ರಾಜಕಾರಣದಲ್ಲಿ ಕಾಂಗ್ರೆಸ್ ನಿರತ:
ಕಾಂಗ್ರೆಸ್ ಪಕ್ಷ ದೇಶದಲ್ಲಿ ಜಾತಿ , ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದೆ.ತುಷ್ಟೀಕರಣ ಹಾಗೂ ದ್ವೇಷದ ರಾಜಕಾರಣದಲ್ಲಿ ಕಾಂಗ್ರೆಸ್ ನಿರತವಾಗಿದೆ. ದ್ವೇಷದ ರಾಜಕಾರಣವಿರುವೆಡೆ ಪ್ರಗತಿ ಅಸಾಧ್ಯ. ಭಾರತದ 75 ವರ್ಷಗಳಲ್ಲಿ 60 ವರ್ಷ ಬಡತನ, ನಿರುದ್ಯೋಗ, ಅವಿದ್ಯಾವಂತಿಕೆಯನ್ನು ತೊಡೆಯಲು ಯಾವುದೇ ಪ್ರಯತ್ನ ನಡೆಯಲಿಲ್ಲ.ಬಡತನವನ್ನು ನಿಗ್ರಹಿಸಿ, ವಿದ್ಯೆ, ಉದ್ಯೋಗ, ಸಮಾನ ಅವಕಾಶ ನೀಡಿ, ಅಭಿವೃದ್ಧಿಯಲ್ಲಿ ಎಲ್ಲರಿಗೆ ಸಮಾನ ಪಾಲು ನೀಡಿ, ಪ್ರಧಾನಿ ಮೋದಿಯವರು ದೇಶವನ್ನು ಪ್ರಗತಿಯತ್ತ ಒಯ್ಯುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ನಮ್ಮ ಗುರಿ.ಸ್ವಾತಂತ್ರ್ಯಾನಂತರದ ದೇಶದ ವೈರಿಗಳನ್ನು ನಿಗ್ರಹಿಸುವಲ್ಲಿ ಪ್ರಧಾನಿ ಮೋದಿಯವರು ಅತ್ಯಂತ ಯಶಸ್ವಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಸಚಿವರಾದ ಗೋವಿಂದ ಕಾತಜೋಳ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಸಿ.ಸಿ ಪಾಟೀಲ್, ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತಿತರರು ಹಾಜರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw