ಯುವ ಪೀಳಿಗೆಯ ಸಾಮಾಜಿಕ ಭದ್ರತೆಯ ಎಚ್ಚರಿಕೆ ಗಂಟೆ
- ಡಾ.ಎಂ.ರಾಮಕೃಷ್ಣಯ್ಯ
ಡಾ.ಡೊಮಿನಿಕ್ ಡಿ ರವರು ಬರೆದಿರುವ ಜಾಗತೀಕರಣದ ಐಡಿಯಾಲಜಿ ಮತ್ತು ಮಾನವ ಹಕ್ಕುಗಳು ಎನ್ನುವ ಹೊತ್ತಿಗೆಯು, ಪ್ರಸ್ತುತವಾಗಿ ಜನಸಾಮಾನ್ಯರನ್ನು ದಿನನಿತ್ಯ ಕಾಡುತ್ತಿರುವ ಸಾಮಾಜಿಕ ತಲ್ಲಣಗಳಿಗೆ ಜಾಗತೀಕರಣವೆಂಬು ದೇ ಮೊದಲ ಅಡಿಪಾಯ ಎನ್ನುವುದನ್ನು ಸರಳವಾಗಿ ವಿವರಿಸಿದ್ದಾರೆ. ಜಾಗತೀಕ ಮಟ್ಟಕ್ಕೆ ಇಡೀ ಜನತೆಯನ್ನು ಕೊಂಡೊಯ್ಯುವ ಐಡಿಯಾಲಜಿಯಲ್ಲಿ ಜನಸಮುದಾಯಗಳು ಶ್ರಮಿಸುತ್ತಿರುವಾಗ, ಉಳ್ಳವರು ಮತ್ತು ಇಲ್ಲದವರು ಎನ್ನುವ ತಾರತಮ್ಯದೊಂದಿಗೆ ವರ್ಗಗಳು ವಿಂಗಡಣೆಯಾಗತೊಡಗಿಡವು. ಉತ್ಪಾದಕ ಮತ್ತು ಅನುತ್ಪಾದಕ ವರ್ಗಗಳು ಸೃಷ್ಠಿಯಾಗುವ ಸಂದರ್ಭದಲ್ಲಿ ಜಾಗತೀಕರಣವೆಂಬುದು ಉತ್ಪಾದಕ ವರ್ಗದ ಹೆಗಲೇರಿ ಅನುತ್ಪಾದಕ ವರ್ಗಕ್ಕೆ ಆಶ್ರಯವಾಯಿತು ಎನ್ನುತ್ತಾರೆ. ಈ ಎರಡು ವರ್ಗಗಳನ್ನು ಜಾಗತೀಕರಣವೆನ್ನುವುದು ಆವರಿಸಿ ತನ್ನ ಮೂಲ ಸಂಸ್ಕೃತಿ ಮತ್ತು ಕುಲಮೂಲೀಯ ಆಚರಣೆಗಳನ್ನು ಹತ್ತಿಕ್ಕುವಲ್ಲಿ ತುಂಬಾ ಯಶಸ್ಸನ್ನು ಕಂಡುಕೊಂಡಿತು. ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಜಾಗದಲ್ಲಿ ತಂತ್ರಜ್ಞಾನವೆಂಬುದನ್ನು ತೂರಿಸಿ ನಿರುದ್ಯೋಗ ಸೃಷ್ಠಿಗೆ ಜಾಗತೀಕರಣವೇ ಕಾರಣವಾಯಿತು. ಇದು ಯುವಪೀಳಿಗೆಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಇಲ್ಲದಂತಾಯಿತು ಎನ್ನುವುದು ಬರಹಗಾರರ ನಿವೇದನೆಯಾಗಿದೆ.
ಜಾಗತೀಕರಣವೆಂಬುದು ಮೂಲ ಬಂಡವಾಳಿಗರ ಕೈಗೊಂಬೆಯಾಗಿ, ಅದು ಇನ್ನೊಂದು ರೀತಿಯ ಜಾತಿ ವ್ಯವಸ್ಥೆಯ ಬಲಿಷ್ಠತೆಗೆ ಮೂಲವೆಂಬಂತಾಯಿತು. ಪ್ರಸ್ತುತದಲ್ಲಿ ಉಚಿತ ಅಕ್ಕಿ ವಿತರಣೆಯನ್ನು ನಾವು ಗಮನಿಸುವುದಾದರೆ ಜಾಗತಿಕ ಮಟ್ಟದಲ್ಲಿ ಆಹಾರಕ್ಕೆ ಎಷ್ಟು ತುಡಿತವಿದೆ, ಹಸಿವಿನ ದಾಹ ಎಷ್ಟರ ಮಟ್ಟಿಗಿದೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಅದರಲ್ಲೂ ದಲಿತರ ಬದುಕಿನಲ್ಲಿ ಆಹಾರ ವ್ಯವಸ್ಥೆಯೇ ಒಂದು ಸವಾಲಾಗಿರುವುದನ್ನು ಹಲವಾರು ಅಂಕಿ ಅಂಶಗಳ ಮೂಲಕ ಲೇಖಕರು ಬಿಚ್ಚಿಟ್ಟಿದ್ದಾರೆ. ಇಷ್ಟೆಲ್ಲದರ ನಡುವೆ ತನ್ನ ಬದುಕಿನ ಹಕ್ಕುಗಳಿಗಾಗಿ ಮಾನವ ತನ್ನ ಹೋರಾಟವನ್ನು ಮುಂದುವರಿಸಬೇಕು, ತಮ್ಮ ಹಕ್ಕುಗಳನ್ನು ತಾವು ಕಾಯ್ದುಕೊಳ್ಳುವಲ್ಲಿ ಶ್ರಮಿಕವರ್ಗಗಳು ಜಾಗರೂಕರಾಗಿರಬೇಕು. ಏಕೆಂದರೆ ಜಾಗತೀಕರಣ ಆಯಾಮಗಳು ಖಾಸಗಿ ವ್ಯಕ್ತಿಗಳ ಕೈಗೊಂಬೆಯಾಗಿವೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
ಭೂ ಹೊಡೆತನ , ಶಿಕ್ಷಣ ವ್ಯವಸ್ಥೆ, ಜಾತೀಯ ಕಠೋರತೆ, ಉದ್ಯೋಗದಲ್ಲಿನ ಅಸಮಾನತೆ, ಆರೋಗ್ಯದಲ್ಲಿನ ಏರಿಳಿತಗಳು ಇವೆಲ್ಲದರ ಮೇಲೆ ಜಾಗತೀಕರಣದ ಛಾಯೆ ಬಲವಾಗಿ ಬಿದ್ದು ಇಡೀ ಜಗತ್ತೇ ಒಂದು ಮಾರಾಟದ ಕೊಂಪೆಯಾಗಿದೆ ಎನ್ನುವುದನ್ನು ನಿರ್ದಿಷ್ಟವಾಗಿ ಅರ್ಥೈಸಿದ್ದಾರೆ. ದೇಶದಲ್ಲಿನ ಯುವಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವ ಎಲ್ಲಾ ಉದ್ಯೋಗ ಸೃಷ್ಠಿಯ ರಂಗಗಳು ಖಾಸಗಿಯವರ ಕಪಿ ಮುಷ್ಠಿಯಲ್ಲಿ ಸಿಲುಕುತ್ತಿರುವುದರಿಂದ, ಇಂದಿನ ಯುವಕರು ತನ್ನ ಬಧ್ರತೆಗಾಗಿ ಇಡೀ ಜಗತ್ತನ್ನೇ ಸುತ್ತಬೇಕು ಎನ್ನುವಂತಾಗಿದೆ. ಹಾಗಾಗಿ ಲೇಖಕರು ತನ್ನ ದಿಟ್ಟ ನಿರ್ಧಾರದಿಂದ ಈ ಜಗತ್ತು ಮಾರಾಟಕ್ಕಿಲ್ಲಾ ! ಎನ್ನುವ ತಲೆಬರಹದಲ್ಲಿ ಲೇಖನವನ್ನು ಬರೆದಿರುವುದು ಯುವಪೀಳಿಗೆಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯ ಕಡೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎನ್ನುವ ಎಚ್ಚರಿಕೆಯ ಗಂಟೆಯನ್ನು ನೀಡಿದ್ದಾರೆ. ಅದಲ್ಲದೆ ಕುಲಮೂಲಿಯ ಸಂಸ್ಕೃತಿ ಮತ್ತು ಸಮಸಮಾಜ ನಿರ್ಮಾಣವಾಗಿ ಜಗತ್ತು ಅಭಿವೃದ್ಧಿಯಾಗದೆ ಯಾವ ದೇಶವು ಬಿಡುಗಡೆಯನ್ನು ಕಾಣಲು ಸಾಧ್ಯವಿಲ್ಲ ಎನ್ನುವುದನ್ನು ಒತ್ತಿ ಹೇಳಿದ್ದಾರೆ.
ಪುಸ್ತಕದ ಹೆಸರು : ಜಾಗತೀಕರಣದ ಐಡಿಯಾಲಜಿ ಮತ್ತು ಮಾನವ ಹಕ್ಕುಗಳು
ಲೇಖಕರು : ಡಾ. ಡೊಮಿನಿಕ್ ಡಿ
ಮುಖಬೆಲೆ : 200/-
ಪ್ರಕಾಶಕರು : ಪುರು ಪ್ರಕಾಶನ ಹೊಸಕೋಟೆ
ಮೊಬೈಲ್ ನಂ :9686279589