ವೀರೇಂದ್ರ ಹೆಗ್ಗಡೆ ವಿರುದ್ಧ ಸುಳ್ಳು ಆರೋಪ ಪ್ರಕರಣ: ಸೋಮನಾಥ ನಾಯಕ್ ಗೆ ಛೀಮಾರಿ ಹಾಕಿದ ಸುಪ್ರಿಂ ಕೊರ್ಟ್, ಅರ್ಜಿ ವಜಾ - Mahanayaka
3:56 AM Wednesday 11 - December 2024

ವೀರೇಂದ್ರ ಹೆಗ್ಗಡೆ ವಿರುದ್ಧ ಸುಳ್ಳು ಆರೋಪ ಪ್ರಕರಣ: ಸೋಮನಾಥ ನಾಯಕ್ ಗೆ ಛೀಮಾರಿ ಹಾಕಿದ ಸುಪ್ರಿಂ ಕೊರ್ಟ್, ಅರ್ಜಿ ವಜಾ

somanath nayak
25/10/2022

ಬೆಳ್ತಂಗಡಿ: ಕೆ.ಸೋಮನಾಥ ನಾಯಕ್‌ ರವರಿಗೆ 3 ತಿಂಗಳ ಸಜೆಯಲ್ಲದೆ, ಕ್ಷೇತ್ರಕ್ಕೆ 4.5 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು ಎಂಬ ಬೆಳ್ತಂಗಡಿ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು  ಸೋಮನಾಥ ನಾಯಕ್ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಇದೀಗ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಸೋಮನಾಥ ನಾಯಕ್ ಅವರ ಬಂಧನ ಖಚಿತವಾಗಿದೆ.  ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರು, ಅಥವಾ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿಯ ಸಂಸ್ಥೆಗಳ ಕುರಿತು ಗೌರವಕ್ಕೆ ಚ್ಯುತಿ ತರುವ ಯಾವುದೇ ರೀತಿಯ ಬರವಣಿಗೆ ಅಥವಾ ಹೇಳಿಕೆ ನೀಡಬಾರದೆಂದು ಈ ಹಿಂದೆ ಬೆಳ್ತಂಗಡಿ ಮಾನ್ಯ ಸಿವಿಲ್ ನ್ಯಾಯಾಲಯವು ಸೋಮನಾಥ ನಾಯಕ್ ಮತ್ತು ಇತರ 5 ಮಂದಿಯ ವಿರುದ್ಧ ಪ್ರತಿಬಂಧಕಾಜ್ಞೆ ಮಾಡಿತ್ತು. ಆದರೂ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದೆ ಸೋಮನಾಥ ನಾಯಕ್ ಸುಳ್ಳು ಆರೋಪಗಳನ್ನು ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳ ಮುಖೇನ ಮಾಡುತ್ತಲೇ ಇದ್ದರು. ಈ ವಿಚಾರವನ್ನು ಕ್ಷೇತ್ರದ ಪರವಾಗಿ ಮಿಸ್ ಕೇಸ್ ನಂಬ್ರ 3/15 ರಲ್ಲಿ ನ್ಯಾಯಾಲಯದ ಮುಂದಿರಿಸಿದಾಗ, ಸುದೀರ್ಘ ವಿಚಾರಣೆ ನಡೆದು ಸೋಮನಾಥ ನಾಯಕ್ ದೋಷಿ ಎಂದು ಪರಿಗಣಿಸಿದ ನ್ಯಾಯಾಲಯ ಸೋಮನಾಥ ನಾಯಕ್‌ರವರಿಗೆ 3 ತಿಂಗಳ ಸಜೆಯಲ್ಲದೆ, ಕ್ಷೇತ್ರಕ್ಕೆ 4.5 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಆದೇಶಿಸಿ ನ್ಯಾಯಾಲಯ ನಾಯಕ್‌ ರ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಆದೇಶದ ವಿರುದ್ಧ ಸೋಮನಾಥ ನಾಯಕ್ ಅಪೀಲು ಸಲ್ಲಿಸಿದ ಬಳಿಕ ಸುದೀರ್ಘ ವಾದ-ವಿವಾದ ನಡೆದು ಅಪರ ನ್ಯಾಯಾಲಯ ದಿನಾಂಕ: 22-03-2022 ರಲ್ಲಿ ನಾಯಕ್ ರವರ ಅಪೀಲಿನಲ್ಲಿ ನಿಜಾಂಶವಿಲ್ಲವೆಂದು ತೀರ್ಪಿತ್ತು, ತನಿಖಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದು ಅಪೀಲು ವಜಾ ಮಾಡಿತ್ತು. ಎರಡೂ ನ್ಯಾಯಾಲಯಗಳಲ್ಲಿ ಸೋಮನಾಥ ನಾಯಕ್ ರವರು ತಪ್ಪಿತಸ್ಥರೆಂದು ರುಜುವಾತಾದಂತೆ ಬೆಳ್ತಂಗಡಿಯ ಹೆಚ್ಚುವರಿ ನ್ಯಾಯಾಲಯ 31-03-2022 ರಂದು, ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸೋಮನಾಥ ನಾಯಕ್ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ ಸೋಮನಾಥ ನಾಯಕ್ ರವರನ್ನು ಬಂಧಿಸಿ 3 ತಿಂಗಳ ಅವಧಿಯ ಸೆರೆಮನೆ ವಾಸಕ್ಕೆ ಕಳುಹಿಸುವುದಕ್ಕೆ ಆದೇಶಿಸಿತ್ತು.

ಈ ಮೇಲಿನ ಆದೇಶಗಳ ವಿರುದ್ಧ ಸೋಮನಾಥ ನಾಯಕ್ ದಿನಾಂಕ: 06-04-2022 ರಂದು ಮಾನ್ಯ ಕರ್ನಾಟಕ ಹೈ ಕೋರ್ಟ್ನಲ್ಲಿ ರಿಟ್ ಪಿಟಿಶನ್ ನಂಬ್ರ: 7692/2022 ರಂತೆ ರಿಟ್ ಅರ್ಜಿ ಸಲ್ಲಿಸಿ ತನ್ನನ್ನು ಬಂಧಿಸದಂತೆ ತಡೆಯಾಜ್ಞೆ ನೀಡಬೇಕೆಂದೂ ಮತ್ತು ಬೆಳ್ತಂಗಡಿ ನ್ಯಾಯಾಲಯಗಳ ಆದೇಶವನ್ನು ವಜಾ ಮಾಡಬೇಕೆಂದು ಪ್ರಾರ್ಥಿಸಿಕೊಂಡಿದ್ದರು.

ಸುದೀರ್ಘ ವಾದ-ವಿವಾದ ಆಲಿಸಿದ ಮಾನ್ಯ ಕರ್ನಾಟಕ ಹೈಕೋರ್ಟ್ ಧರ್ಮಸ್ಥಳದ ಹೆಗ್ಗಡೆಯವರ ಘನತೆಯನ್ನು ದೇಶವೇ ಗುರುತಿಸಿ ಗೌರವಿಸುತ್ತಿರುವಾಗ ನ್ಯಾಯಾಲಯಗಳ ಆದೇಶವನ್ನು ಸಹ ಲೆಕ್ಕಿಸದೆ ಸುಳ್ಳು ಆರೋಪಗಳ ಮುಖೇನ ನ್ಯಾಯಾಲಯಕ್ಕೂ ಧರ್ಮಸ್ಥಳದ ಹೆಗ್ಗಡೆಯವರಿಗೂ ಅಗೌರವ ತೋರಿದ ಸೋಮನಾಥ ನಾಯಕ್ ಬಗ್ಗೆ ಮೃದುಧೋರಣೆ ತೋರಿದಲ್ಲಿ ನ್ಯಾಯಾಂಗ ವ್ಯವಸ್ಥೆಗೇ ಕಳಂಕ ಎಂದು ನಾಯಕ್‌ ಗೆ ಛೀಮಾರಿ ಹಾಕಿ ಬೆಳ್ತಂಗಡಿಯ ಎರಡೂ ನ್ಯಾಯಾಲಯಗಳ ಆದೇಶ ನ್ಯಾಯೋಚಿತವಾಗಿದ್ದು ತಾನು ಮಧ್ಯ ಪ್ರವೇಶಿಸುವ ಅಗತ್ಯವೇ ಇರುವುದಿಲ್ಲ ಎಂಬ ತನ್ನ ಸುಧೀರ್ಘ 148 ಪುಟಗಳ ಐತಿಹಾಸಿಕ ತೀರ್ಪು ನೀಡಿ ಸೋಮನಾಥ ನಾಯಕ್ ಬಂಧನಕ್ಕೆ ದಿನಾಂಕ: 05-05-2022 ರಂದು ಹಸಿರು ನಿಶಾನೆ ನೀಡಿತ್ತು.

ಈ ಆದೇಶದ ವಿರುದ್ಧ ಸೋಮನಾಥ್ ನಾಯಕ್ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ನಂಬ್ರ 16127/2022 ರಂತೆ ಅರ್ಜಿ ಸಲ್ಲಿಸಿದ್ದರು. ದಿನಾಂಕ 19-10-2022 ರಲ್ಲು ಎರಡೂ ಕಡೆಯ ವಾದಗಳನ್ನು ಆಲಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಬೆಳ್ತಂಗಡಿಯ ನ್ಯಾಯಾಲಯಗಳು ನೀಡಿದ ತೀರ್ಪುಗಳಿಗೆ ತಾನು ಮಧ್ಯ ಪ್ರವೇಶಿಸುವ ಯಾವುದೇ ಕಾರಣಗಳು ಕಂಡು ಬರುವುದಿಲ್ಲ. ನ್ಯಾಯಾಲಯದ ಪ್ರತಿಬಂಧಕಾಜ್ಞೆ ಊರ್ಜಿತದಲ್ಲಿದ್ದರೂ ಅರ್ಜಿದಾರ ಪದೇ ಪದೇ ನ್ಯಾಯಾಲಯದ ಆಜ್ಞೆಯನ್ನು ಧಿಕ್ಕರಿಸಿ ಉಲ್ಲಂಘಿಸಿರುವುದು ಉದ್ದೇಶಪೂರ್ಕವಾಗಿದೆ. ಅರ್ಜಿದಾರ ಕೆ. ಸೋಮನಾಥ್ ನಾಯಕ್ ಆದೇಶ ಉಲ್ಲಂಘಿಸಿದ ತಪ್ಪಿತಸ್ಥ ಎಂಬುವುದು ರುಜುವಾತುಗೊಂಡ ಕಾರಣ ವಾದ ಮಂಡನೆಯ ಮಧ್ಯೆ ನ್ಯಾಯ ಪೀಠವು ಕೆ.ಸೋಮನಾಥ್ ನಾಯಕ್ ಅವರ ವರ್ತನೆಗೆ ಕಟು ಶಬ್ಧಗಳಿಂದ ಛೀಮಾರಿ ಹಾಕಿ ಅವರು ನಿವೇದಿಸಿಕೊಂಡ ಕ್ಷಮಾಪಣೆಯನ್ನೂ ತಿರಸ್ಕರಿಸಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತೀರ್ಪಿತ್ತಿದೆ.

ಕೆ. ಸೋಮನಾಥ್ ನಾಯಕ್ ರವರ ಬಂಧನಕ್ಕೆ ಬೆಳ್ತಂಗಡಿ ನ್ಯಾಯಾಲಯವು ಈಗಾಗಲೇ ವಾರೆಂಟ್ ಜಾರಿಗೊಳಿಸಿದೆ. ಶ್ರೀ ಕ್ಷೇತ್ರವನ್ನು ದೆಹಲಿಯ ಹಿರಿಯ ನ್ಯಾಯಾವಾದಿ ಕೆ.ವಿ. ವಿಶ್ವನಾಥನ್, ವಿ.ಎನ್. ರಘುಪತಿ, ಕೆ. ಚಂದ್ರನಾಥ ಆರಿಗ, ಬೆಂಗಳೂರು, ಮತ್ತು ರತ್ನವರ್ಮ ಬುಣ್ಣು, ನ್ಯಾಯಾವಾದಿ, ಬೆಳ್ತಂಗಡಿ ಅವರ ತಂಡ ಪ್ರತಿನಿಧಿಸಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ