ತೆಲಂಗಾಣದಲ್ಲಿ ಪಾಲಿಟಿಕ್ಸ್ ಬಲು ಜೋರು: ಪೋಸ್ಟರ್ ಗಳಲ್ಲಿ ದೇವತೆ ರೂಪ ಪಡೆದ ಸೋನಿಯಾ ಗಾಂಧಿ; ಬಿಜೆಪಿ ಕೆಂಡಾಮಂಡಲ
ಕಾಂಗ್ರೆಸ್ ಪಕ್ಷದ ಮುಖಂಡೆ ಸೋನಿಯಾ ಗಾಂಧಿ ಅವರನ್ನು ದೇವತೆಯಂತೆ ಚಿತ್ರಿಸುವ ಪೋಸ್ಟರ್ ಗಳನ್ನು ತೆಲಂಗಾಣದಲ್ಲಿ ಹಾಕಿದ ನಂತರ ಬಿಜೆಪಿಯು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಪೋಸ್ಟರ್ ಗಳಲ್ಲಿ ಸೋನಿಯಾ ಗಾಂಧಿ ದೇವತೆಯಂತೆ ವೇಷ ಧರಿಸಿ, ಆಭರಣದ ಕಿರೀಟವನ್ನು ಧರಿಸಿರುವುದನ್ನು ತೋರಿಸಲಾಗಿದೆ. ಪೋಸ್ಟರ್ ಗಳು ಆಕೆಯ ಬಲ ಅಂಗೈಯಿಂದ ಹೊರಹೊಮ್ಮುವ ತೆಲಂಗಾಣದ ನಕ್ಷೆಯನ್ನು ಸಹ ಚಿತ್ರಿಸುತ್ತವೆ.
ಕಾಂಗ್ರೆಸ್ ಕಾರ್ಯಕರ್ತರ ಈ ಕ್ರಮವನ್ನು “ನಾಚಿಕೆಗೇಡಿನದು” ಎಂದು ಕರೆದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಯಾವಾಗಲೂ ತಮ್ಮ ಪರಿವಾರವನ್ನು ದೇಶ ಮತ್ತು ಅದರ ಜನರಿಗಿಂತ ದೊಡ್ಡದು ಎಂದು ನೋಡುತ್ತದೆ ಎಂದು ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಮುಕ್ತಾಯಗೊಂಡ ನಂತರ ಈ ಪೋಸ್ಟರ್ ಗಳನ್ನು ಹಾಕಲಾಗಿದೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಈ ಸಭೆ ನಡೆದಿತ್ತು.
ಈ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಎಕ್ಸ್‌ನಲ್ಲಿ, ಕಾಂಗ್ರೆಸ್ ಭಾರತವನ್ನು ಅವಮಾನಿಸುವ ಅಭ್ಯಾಸವನ್ನು ಮಾಡಿಕೊಂಡಿದೆ ಎಂದು ಪೂನಾವಾಲಾ ಆರೋಪಿಸಿದ್ದಾರೆ.
“ಆರಾಧನಾ ಮಿಶ್ರಾ ಅವರಂತಹ ಕಾಂಗ್ರೆಸ್ ನಾಯಕರು ಭಾರತ್ ಮಾತಾ ಕಿ ಜೈ, ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಈ ಹಿಂದೆ ಬಿ.ಡಿ.ಕಲ್ಲಾ ಅವರು ಸೋನಿಯಾ ಮಾತಾ ಕಿ ಜೈ ಎಂದು ಎಂದು ಹೇಳಿದ್ದರು.
ಇಂದಿರಾ ಗಾಂಧಿಯನ್ನು ಭಾರತಕ್ಕೆ ಹೋಲಿಸಿದಂತೆಯೇ ಈಗ ಕಾಂಗ್ರೆಸ್, ಸೋನಿಯಾ ಗಾಂಧಿಯನ್ನು ಭಾರತ ಮಾತೆಗೆ ಹೋಲಿಸಿದೆ. ಇದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ’ ಎಂದು ಅವರು ಕಿಡಿಕಾರಿದ್ರು.