ಆಪತ್ಬಾಂಧವ ಸೋನು ಸೂದ್ ಅವರಿಗೆ ದೇವಸ್ಥಾನ ಕಟ್ಟಿದ ಜನರು | ದೇವರುಗಳು ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಜನರನ್ನು ರಕ್ಷಿಸಿದ್ದ ಸೋನು ಸೂದ್ - Mahanayaka
11:16 AM Sunday 22 - December 2024

ಆಪತ್ಬಾಂಧವ ಸೋನು ಸೂದ್ ಅವರಿಗೆ ದೇವಸ್ಥಾನ ಕಟ್ಟಿದ ಜನರು | ದೇವರುಗಳು ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಜನರನ್ನು ರಕ್ಷಿಸಿದ್ದ ಸೋನು ಸೂದ್

21/12/2020

ಸಿದ್ದಿಪೇಟ್: ಕೊರೊನಾ ಸಮಯದಲ್ಲಿ ಯಾವ ದೇವರುಗಳೂ ಸಹಾಯಕ್ಕೆ ಬರಲಿಲ್ಲ. ಸಹಾಯಕ್ಕೆ ಬಂದದ್ದು ಬಾಲಿವುಡ್ ನಟ ಸೋನು ಸೂದ್. ಹಾಗಾಗಿ ಅವರೇ ದೇವರು ಎಂದು ಜನರು ಅವರಿಗೆ ದೇವಸ್ಥಾನ ಕಟ್ಟಲು ಮುಂದಾಗಿದ್ದಾರೆ.

ತೆಲಂಗಾಣದ ಸಿದ್ದಿಪೇಟ್ ನಲ್ಲಿರುವ ಡುಬ್ಬಾ ತಾಂಡದ ಜನತೆಗೆ ಸೋನು ಸೂದ್ ಅವರೇ ಈಗ ದೇವರು. ಅವರಿಗಾಗಿ ಇದೀಗ ಇಲ್ಲಿನ ಜನತೆ ದೇವಸ್ಥಾನವನ್ನೇ ಕಟ್ಟಿದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಯಾರ ನೆರವೂ ಇಲ್ಲದೇ ಜನರು ನಡೆದುಕೊಂಡು ಸಾವಿರಾರು ಕಿ.ಮೀ. ಸಂಚರಿಸುತ್ತಿದ್ದ ಕಷ್ಟದ ಸಮಯದಲ್ಲಿ ಯಾವ ದೇವರೂ ಪ್ರತ್ಯಕ್ಷವಾಗಿ ಜನರ ಕಷ್ಟಗಳನ್ನು ಪರಿಹರಿಸಿಲ್ಲ.  ಸೋನುಸೂದ್ ಅವರು ಮಾತ್ರವೇ ಕಾರ್ಮಿಕರಿಗೆ ನೆರವಾಗಿದ್ದರು.

ಸೋನು ಸೂದ್ ಅವರು ಜನರಿಗೆ ಮಾಡಿರುವ ಸಹಾಯ ಕೇವಲ ಭಾರತ ಮಾತ್ರವಲ್ಲ, ವಿಶ್ವದಲ್ಲಿಯೇ ಮಣ್ಣನೆ ಗಳಿಸಿದೆ. ಅವರಿಗೆ ವಿಶ್ವ ಸಂಸ್ಥೆಯ ಎಸ್ ಡಿಜಿ ವಿಶೇಷ ಮಾನವೀಯ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ಜನರ ಕಷ್ಟದ ಸಂದರ್ಭದಲ್ಲಿ ಅವರಿಗೆ ನೆರವು ಮಾಡಿದ್ದಾರೆ. ಲಕ್ಷಾಂತರ ಕಾರ್ಮಿಕರು  ತಮ್ಮ ಗೂಡು ಸೇರುವಂತೆ ಮಾಡಿದ್ದಾರೆ. ಹೀಗಾಗಿ ನಮ್ಮ ಊರಿನಲ್ಲಿ ಅವರಿಗಾಗಿ ಗುಡಿಕಟ್ಟಿದ್ದೇವೆ.  ದೇವರಂತೆಯೇ ಅವರಿಗೂ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಎಲ್ಲ ದೇವರುಗಳು ಬಾಗಿಲು ಮುಚ್ಚಿದ್ದರೆ, ಸೋನು ಸೂದ್ ಎಂಬ ದೇವರು ಮಾತ್ರ ಜನರಿಗಾಗಿ ತಮ್ಮ ಮನಸ್ಸಿನ ಬಾಗಿಲು ತೆರೆದರು. ಕೋಟಿ ಗಟ್ಟಲೆ ಆಸ್ತಿ ಸಂಪಾದಿಸುವ ನಾಯಕ ನಟರು, ಕೈ ತೊಳೆದುಕೊಳ್ಳಿ, ಮಾಸ್ಕ್ ಹಾಕಿಕೊಳ್ಳಿ ಎಂದು ಬಿಟ್ಟಿ ಉಪದೇಶಗಳನ್ನು ನೀಡಿದ್ದರು. ಇನ್ನು ಕೆಲವರು, ಜನರು ಮನೆಯಲ್ಲಿ ತಿನ್ನಲು ಅನ್ನ ಇಲ್ಲ ಎಂದು ಪರದಾಡುತ್ತಿದ್ದರೆ, ಕಾರ್ಮಿಕರ ಮಕ್ಕಳು ಹಸಿವಿನಿಂದ ನಡು ರಸ್ತೆಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ, ಲಾಕ್ ಡೌನ್ ಸ್ಪೆಷಲ್ ಡಿಶ್ ಎಂದು ಶೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದರು. ಇಂತಹ ಸಂದರ್ಭದಲ್ಲಿ ಸೋನು ಸೂದ್ ಹಾಗೂ ಕೆಲವೇ ಕೆಲವು ನಟರು ಮಾತ್ರವೇ ನಾವು ಜೀವಂತವಿದ್ದೇವೆ ಎನ್ನುವುದನ್ನು ತೋರಿಸಿದ್ದರು. ಕಷ್ಟದಲ್ಲಿದ್ದ ಜನರಿಗೆ ನೆರವು ನೀಡಿದ್ದರು. ಹೀಗಾಗಿ ಅವರನ್ನು ಜನರು ದೇವರಾಗಿ ನೋಡುತ್ತಿದ್ದಾರೆ.

ಇತ್ತೀಚಿನ ಸುದ್ದಿ