ಕ್ಷಮಿಸಿ ಬಿಡು ಕಂದಾ | ಉದಂತ ಶಿವಕುಮಾರ್
ನಿನ್ನಮ್ಮನೂ ನಾ ಕೊಟ್ಟ ಹಾಲು
ಕುಡಿದು ಬೆಳೆದವಳು ಕಂದಾ
ನಿನಗೆ ಮಾತ್ರ ನಂಜಾದದ್ದು
ಏಕೆಂದು ತಿಳಿಯುತ್ತಿಲ್ಲ ಕಂದಾ
ಆದರೂ ಆಕೆ ಕೇಡು ಬಗೆಯಲಿಲ್ಲ
ಏಕೆಂದರೆ ಆಕೆ ನನ್ನ ಹಾಗೆ ತಾಯಿಯಾದವಳು
ಕೊಲ್ಲುವ ಮನಸಿದ್ದರೆ ಒಂದೇ
ಬಾರಿಗೆ ಕೊಂದು ಬಿಡಬೇಕಿತ್ತು ಕಂದಾ
ಇಲ್ಲದಿದ್ದರೆ ಉಸಿರು ನಿಲ್ಲುವವರೆಗೂ
ನೀನು ನೇಣು ಬಿಗಿಯಬೇಕಿತ್ತು ಕಂದಾ
ಆದರೆ ಹೀಗೆ ಹಾಲಿಗೆ ಹುಳಿ ಹಿಂಡುವ
ಕೆಲಸ ಮಾಡಬಾರದಿತ್ತು ಕಂದಾ
ನನ್ನ ಕೆಚ್ಚಲು ಕುಯ್ಯುವಾಗ ನಿನಗೆ
ಅಮ್ಮನ ನೆನಪಾಗಲಿಲ್ಲವೆ ಕಂದಾ
ಹಾಲು ಕುಡಿಯುವ ನಿನ್ನ ಬುದ್ದಿಗೆ
ರಕ್ತ ಕುಡಿಯುವ ಗರ ಬಡಿದದ್ದಾರೂ
ಏತಕೆ ಕಂದಾ, ಹುಲ್ಲು ರಕ್ತವಾಗಿ, ರಕ್ತ
ಹಾಲಾಗಿಸುವುದು ಹೇಗೆಂದು ನಿನ್ನಮ್ಮನನ್ನು
ಕೇಳಬೇಕಾಗಿತ್ತು ಕಂದಾ
ಮಾತಿನ ಧ್ವನಿಯಿಲ್ಲ ಹಾಡುವ ಕೊರಳಿಲ್ಲ
ಒಸರುವ ರಕ್ತದಲ್ಲಿ ಯಾವ ಹಸಿರು
ಬೆಳೆಯುವುದಿಲ್ಲ ಕಂದಾ, ಅಮ್ಮನ ತಾಳ್ಮೆಯ
ಭೂತಾಯಿಯ ಸಹನೆಯ ಪರೀಕ್ಷಿಸಬಾರದು ಕಂದಾ
ಹಾಲು ಹಾಲಹಲವಾದರೆ ಬದುಕು ಉಳಿಯುವುದೇ ಭೂಮಿಯಲ್ಲಿ ಕಂದಾ, ಕ್ಷಮಿಸಿ ಬಿಡು ಕಂದ
ನಿನಗೆ ಬೇಕಾದದ್ದು ನಾನು ಕೊಡಲಾದದ್ದಕ್ಕೆ !
- ಉದಂತ ಶಿವಕುಮಾರ್
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: