ಸೊಸೆಯನ್ನು ವಿದ್ಯುತ್ ಆಘಾತದಿಂದ ಪಾರು ಮಾಡಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಅತ್ತೆ!
ಜಾರ್ಖಂಡ್: ಸೊಸೆಯನ್ನು ವಿದ್ಯುತ್ ಶಾಕ್ ನಿಂದ ಪಾರು ಮಾಡಲು ಹೋದ ಅತ್ತೆ ಕೂಡ ವಿದ್ಯುತ್ ಶಾಕ್ ಗೆ ಬಲಿಯಾಗಿರುವ ಘಟನೆ ಜಾರ್ಖಂಡ್ ನ ಧನ್ಬಾದ್ ನಲ್ಲಿ ನಡೆದಿದ್ದು, ಏಕಕಾಲದಲ್ಲಿ ಅತ್ತೆ ಸೊಸೆ ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ.
ಧನ್ಭಾದ್ ನ ಪುಟ್ಕಿ ಪೊಲೀಸ್ ಠಾಣೆಯಲ್ಲಿ ಕರಂದ್ ನಲ್ಲಿ ನಡೆದಿದ್ದು, 70 ವರ್ಷ ವಯಸ್ಸಿನ ಚಮರ್ ಹಾಗೂ 35 ವರ್ಷ ವಯಸ್ಸಿನ ಗುಡಿಯಾ ದೇವಿ ವಿದ್ಯುತ್ ಆಘಾತಕ್ಕೆ ಬಲಿಯಾದವರಾಗಿದ್ದಾರೆ. ಕಬ್ಬಿಣದ ಪೆಟ್ಟಿಗೆಯ ಮೇಲೆ ಇಡಲಾಗಿದ್ದ ಟಿವಿಯನ್ನು ಆನ್ ಮಾಡಲು ಗುಡಿಯಾ ದೇವಿ ಹೋಗಿದ್ದು, ಈ ವೇಳೆ ಅವರಿಗೆ ಶಾಕ್ ಹೊಡೆದಿದೆ. ಇದನ್ನು ಗಮನಿಸಿದ ಅತ್ತೆಯು ಸೊಸೆಯನ್ನು ಬದುಕಿಸಲೆಂದು ಆಕೆಯನ್ನು ಮುಟ್ಟಿದ್ದು, ಈ ವೇಳೆ ಅವರಿಗೂ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಅತ್ತೆ ಹಾಗೂ ಸೊಸೆ ಅನ್ಯೋನ್ಯತೆಯಿಂದ ಜೀವಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ ದುರಾದೃಷ್ಟವಶಾತ್ ಒಂದೇ ದಿನ ಅತ್ತೆ ಸೊಸೆ ಇಬ್ಬರೂ ಬಲಿಯಾಗಿದ್ದಾರೆ. ಇವರಿಬ್ಬರು ವಿದ್ಯುತ್ ಶಾಕ್ ನಿಂದ ಮೃತಪಟ್ಟದ್ದನ್ನು ಕಣ್ಣಾರೆ ಕಂಡ ಮೂರು ವರ್ಷ ವಯಸ್ಸಿನ ಅವರ ಮಗು ಜೋರಾಗಿ ಅಳಲು ಆರಂಭಿಸಿದ್ದು, ಅನುಮಾನ ಬಂದು ನೆರೆಯ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.