ಶೋಷಿತ ಸಮುದಾಯದ ಸರ್ಕಾರಿ ನೌಕರರು ಅಂಬೇಡ್ಕರ್ ಅವರನ್ನು ಮರೆಯುತ್ತಿದ್ದಾರೆ | ಕಾಂಗ್ರೆಸ್ ಮುಖಂಡ ಅತೀಕ್ ಅಹಮದ್

ತುಮಕೂರು: ಸಂವಿಧಾನದಿಂದ ಲಾಭ ಪಡೆದು ಸರ್ಕಾರಿ ನೌಕರಿಗೆ ಸೇರಿ ಹಣ ಸಂಪಾದಿಸುತ್ತಿರುವ ಶೋಷಿತ ಸಮುದಾಯಗಳ ಜನರು ಮುಂದಿನ ಪೀಳಿಗೆಗೆ ಅಂಬೇಡ್ಕರ್ ತತ್ವ, ಸಿದ್ಧಾಂತಗಳನ್ನು ಹಸ್ತಾಂತರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಲ್ಪ ಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಜಯಪುರ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ‘ಮಹಾನಾಯಕ’ ಫ್ಲೆಕ್ಸ್ ಅನಾವರಣ, ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡುತ್ತಿದ್ದರು.
ಶೋಷಿತ ಸಮುದಾಯದ ಜನರು ತಮ್ಮ ಅಭಿವೃದ್ಧಿಕೆ ಕಾರಣರಾದವರನ್ನು ಮರೆಯುತ್ತಿದ್ದಾರೆ. ಇನ್ನೊಂದೆಡೆ, ಸಂವಿಧಾನದಿಂದ ಎಲ್ಲಾ ವರ್ಗದ ಜನರು ಅನುಕೂಲ ಪಡೆದುಕೊಳ್ಳುತ್ತಿದ್ದರೂ, ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಲಾಗುತ್ತಿದೆ. ಪ್ರಪಂಚದ ವಿವಿಧೆಡೆ ಅವರು ಜ್ಞಾನದ ಸಂಕೇತವಾಗಿ ಆರಾಧಿಸಲ್ಪಡುತ್ತಿದ್ದರೆ, ಭಾರತದಲ್ಲಿ ಮಾತ್ರ, ದೀನ, ದಲಿತರ, ಶೋಷಿತರ ಪ್ರತಿನಿಧಿಯಾಗಿ ಸೀಮಿತಗೊಳಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಎಸ್.ಸಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ವಿಷಯಗಳು ಪ್ರಮುಖವಾಗಿ ಚರ್ಚೆಯಾಗುತ್ತಿವೆ. ಸಂವಿಧಾನದ ಅನ್ವಯ ರಚಿತವಾದ ರಿಸರ್ವ್ ಬ್ಯಾಂಕ್‍ನ ಕಟ್ಟುನಿಟ್ಟಾದ ಆರ್ಥಿಕ ನೀತಿಗಳ ಫಲವಾಗಿ ಪ್ರಪಂಚವೇ ಆರ್ಥಿಕ ಸಂಕಷ್ಟಕ್ಕೆ ಒಳಗಾದರೂ ದೇಶದ ಆರ್ಥಿಕ ಸ್ಥಿತಿಗತಿಯ ಮೇಲೆ ಹೆಚ್ಚಿನ ಪರಿಣಾಮ ಬೀರಿರಲಿಲ್ಲ. ಇದು ಅವರ ಮೇಧಾವಿತನಕ್ಕೆ ಸಾಕ್ಷಿಯಾಗಿದೆ. ಸಂವಿಧಾನಕ್ಕೆ ಧಕ್ಕೆ ಉಂಟಾಗುವ ಸಂದರ್ಭ ಎದುರಾದರೆ, ಅಂತಹ ಪ್ರಯತ್ನಗಳನ್ನು ಒಗ್ಗೂಡಿ ಹಿಮ್ಮೆಟ್ಟಿಸಬೇಕಾಗಿದೆ ಎಂದರು.
ಸಮಿತಿ ಮುಖಂಡ ಪಿ.ಶಿವಾಜಿ ಮಾತನಾಡಿ, ಮೀಸಲಾತಿ ಉಳಿಯಬೇಕಾದರೆ ಸಂವಿಧಾನ ಜಾರಿಯಾಗಬೇಕು. ಆದರೆ ಮೀಸಲಾತಿ ಇನ್ನೆಷ್ಟು ದಿನ ಮುಂದುವರೆಯಬೇಕು ಎಂದು ಪ್ರಶ್ನಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಅದರ ಎಲ್ಲಾ ಆಶಯಗಳು ಇಂದಿಗೂ ಈಡೇರಿಲ್ಲ. ಈ ಬಗ್ಗೆ ಯುವಜನರಿಗೆ, ಶೋಷಿತ ಸಮುದಾಯದವರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.