ಸಭೆಗೆ ಕರೆಯಲಿಲ್ಲ ಎಂದು ಲಾಂಗ್ ನಿಂದ ಹಲ್ಲೆ ನಡೆಸಿದ ಚುನಾವಣೆ ಸೋತ ಅಭ್ಯರ್ಥಿಗಳು!
ಬೆಂಗಳೂರು: ಗ್ರಾಮ ಪಂಚಾಯತ್ ಸಭೆಗೆ ತಮ್ಮನ್ನು ಕರೆಯಲಿಲ್ಲ ಎಂದು ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಲಾಂಗ್ ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಪರಿಣಾಮವಾಗಿ ವಾಟರ್ ಮ್ಯಾನ್ ಪಾಜೀಲ್ ಅಹ್ಮದ್ ಎಂಬವರಿಗೆ ಗಾಯವಾಗಿದೆ.
ಹೊಸಕೋಟೆಯಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಬೈಲನರಸಾಪುರ ಗ್ರಾಮ ಪಂಚಾಯತಿ ಸಭೆ ನಡೆಯುವ ಸಂದರ್ಭದಲ್ಲಿ ಲಾಂಗ್, ಮಚ್ಚುಗಳಿಂದ ಬೆದರಿಸಲಾಗಿದೆ.
ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಸಭೆಗೆ ಕರೆಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕೆಲವರು ಲಾಂಗ್ ನಿಂದ ಹಲ್ಲೆ ಮಾಡಿದ್ದು, ದೂರು, ಪ್ರತಿ ದೂರು ದಾಖಲಾಗಿದೆ.
ಬೈಲನರಸಾಪುರ ಗ್ರಾಮ ಪಂಚಾಯತಿ ಸದಸ್ಯರುಗಳು ಯಾವಾಗ ಸಭೆ ಮಾಡಬೇಕು?, ಯಾವ ಕೆಲಸಗಳನ್ನು ಮಾಡಬೇಕು ಎಂದು ಚರ್ಚಿಸುತ್ತಿದ್ದ ವೇಳೆ ಸೋತ ಅಭ್ಯರ್ಥಿಗಳು ತಮ್ಮನ್ನು ಸಭೆಗೆ ಕರೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಈ ವೇಳೆ ಪಿಡಿಓ ಅವರು ಗಲಾಟೆ ಮಾಡುವವರನ್ನು ಹೊರಗೆ ಕಳುಹಿಸಿದ್ದಾರೆ. ಬಳಿಕ ನೀರಿನ ಬಾಟಲ್ ತರಲೆಂದು ವಾಟರ್ ಮ್ಯಾನ್ ಪಂಚಾಯತಿ ಕಚೇರಿಯಿಂದ ಹೊರಗೆ ಹೋದಾಗ ಕೆಲವರು ಲಾಂಗ್ ಹಿಡಿದುಕೊಂಡು ಬಂದಿದ್ದು, ವಾಟರ್ ಮ್ಯಾನ್ ಪಾಜೀಲ್ ಅಹ್ಮದ್ ಅವರ ತಲೆಗೆ ಲಾಂಗ್ ಬೀಸಿದ್ದಾರೆ. ಈ ವೇಳೆ ಅವರು ಕೈ ಅಡ್ಡ ಇರಿಸಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಕೈಗೆ ಗಾಯವಾಗಿದೆ.