ಸೋತರೂ ಗೆದ್ದ ಸತೀಶ್ ಜಾರಕಿಹೊಳಿ | ಬಿಜೆಪಿಯ ಕೋಟೆಯಲ್ಲಿಯೇ ಸೋಲಿನ ನಡುಕ ಹುಟ್ಟಿಸಿದ ಸತೀಶ್! - Mahanayaka
10:14 PM Thursday 12 - December 2024

ಸೋತರೂ ಗೆದ್ದ ಸತೀಶ್ ಜಾರಕಿಹೊಳಿ | ಬಿಜೆಪಿಯ ಕೋಟೆಯಲ್ಲಿಯೇ ಸೋಲಿನ ನಡುಕ ಹುಟ್ಟಿಸಿದ ಸತೀಶ್!

Satish jarakiholi
03/05/2021

ಬೆಳಗಾವಿ: ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಮಂಗಳ ಅಂಗಡಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿಗೆ ನಾನಾ ರೀತಿಯ ವ್ಯಾಖ್ಯಾನಗಳು ದೊರೆಯುತ್ತಿರುವ ನಡುವೆಯೇ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಸೋತರೂ ಗೆದ್ದಿದ್ದಾರೆ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಹಳ ಸುಲಭವಾಗಿ ಗೆಲ್ಲುವ ವಾತಾವರಣ ಇತ್ತು. ಮಾಜಿ ಸಿಎಂ, ಹಾಲಿ ಕೈಗಾರಿಕಾ ಸಚಿವರಾಗಿರುವ ಜಗದೀಶ ಶೆಟ್ಟರ್, ಬೆಳಗಾವಿ ಲೋಕಸಭಾ ಉಪ ಚುನಾವಣೆಯ ನೇತೃತ್ವವಹಿಸಿದ್ದರು. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿಗೆ  ಟಿಕೆಟ್ ನೀಡುವಲ್ಲಿಂದ ಪ್ರಚಾರ, ಪ್ರತಿಯೊಂದರಲ್ಲಿಯೂ ಶೆಟ್ಟರ್ ಅವರದ್ದೇ  ಪ್ಲಾನ್  ಇತ್ತು. ಜೊತೆ ಲಿಂಗಾಯಿತರ ಮತಗಳನ್ನು ಸೆಳೆಯುವಲ್ಲಿ, ಶೆಟ್ಟರ್ ಪಾತ್ರ ಹೆಚ್ಚಿತ್ತು. ಆದರೆ, ಕಾಂಗ್ರೆಸ್ ಸತೀಶ್ ಜಾರಕಿಹೊಳಿಯನ್ನು ಕಣಕ್ಕಿಳಿಸಿದಾಗ ಬಿಜೆಪಿ ಅಕ್ಷರಶಃ ದಂಗಾಗಿತ್ತು.

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿಯವರನ್ನು ಬಿಟ್ಟು ಬೇರೆ ಯಾರನ್ನೇ ಕಣಕ್ಕಿಳಿಸಿದ್ದರೂ ಬಿಜೆಪಿ ಆರಾಮವಾಗಿ ಗೆಲುವು ಸಾಧಿಸುತ್ತಿತ್ತು. ಆದರೆ, ಸತೀಶ್ ಜಾರಕಿಹೊಳಿಗೆ ಸಾಕಷ್ಟು ವ್ಯತಿರಿಕ್ತವಾಗಿದ್ದ ಪರಿಸ್ಥಿತಿಯಲ್ಲಿ ಕೂಡ ಬೆಳಗಾವಿಯಲ್ಲಿ ಅವರು ಗೆಲುವಿನ ಅತೀ ಸಮೀಪಕ್ಕೆ ಬಂದಿದ್ದರು. ಒಂದು ಹಂತದಲ್ಲಿ ಬಿಜೆಪಿ ನಾಯಕರಿಗೆ ಬೆವರಿಳಿಸುವಲ್ಲಿ ಯಶಸ್ವಿಯಾಗಿದ್ದರು.

ಬಿಜೆಪಿ ಅಭ್ಯರ್ಥಿಗೆ ಅನುಕಂಪದ ಮತಗಳಿದ್ದವು, ಬಿಜೆಪಿ ಪಕ್ಷದ ಹೆಸರಿನ ಮತಗಳಿದ್ದವು ಜೊತೆಗೆ ಇಡೀ ಆಡಳಿತ ಪಕ್ಷದ ಬೆಂಬಲವೇ ಇತ್ತು. ಸಿಎಂ ಯಡಿಯೂರಪ್ಪನವರನ್ನು ಜಗದೀಶ್ ಶೆಟ್ಟರ್ ಎರಡು ಬಾರಿ ಬೆಳಗಾವಿಗೆ ಕರೆಸಿ ಪ್ರಚಾರ ನಡೆಸಿದ್ದರು. ಬಿಜೆಪಿಯ ಘಟಾನುಘಟಿ ನಾಯಕರು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ನಡೆಸಿದ್ದರು. ಇವೆಲ್ಲದರ ಹೊರತಾಗಿ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದ್ದ ಲೋಕಸಭಾ ಕ್ಷೇತ್ರದ ಅರಭಾವಿಯಲ್ಲಿ ಸ್ವತಃ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಯೇ ಪ್ರತಿಸ್ಪರ್ಧಿಗಳ ಪಕ್ಷದಲ್ಲಿದ್ದರು. ಇಷ್ಟೆಲ್ಲ ಅಗ್ನಿಪರೀಕ್ಷೆಗಳ ನಡುವೆಯೇ ಸತೀಶ್ ಜಾರಕಿಹೊಳಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದರು.

24ನೇ ಸುತ್ತಿನ ಮತ ಎಣಿಕೆಯಿಂದ ಸತೀಶ್ ಜಾರಕಿಹೊಳಿ ಲೀಡ್ ಪಡೆದುಕೊಂಡಿದ್ದರು. ಇದರಿಂದಾಗಿ ಬಿಜೆಪಿ ನಾಯಕರಿಗೆ ಸೋಲಿನ ಭಯವನ್ನು ಸತೀಶ್ ತೋರಿಸಿದ್ದರು. ಬಿಜೆಪಿ ಸೋತೆ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಸತೀಶ್ ಜಾರಕಿಹೊಳಿ ಮತಗಳನ್ನು ಗಳಿಸಿದ್ದರು. ಕೊನೆಯ ಕ್ಷಣಗಳವರೆಗೆ ಕೂಡ ಸತೀಶ್ ಜಾರಕಿಹೊಳಿ ಮತ್ತೆ ಮುನ್ನಡೆ ಸಾಧಿಸುತ್ತಾರೆ ಎನ್ನುವ ಭಯ ಬಿಜೆಪಿ ಪಾಳಯಕ್ಕೆ ಸೃಷ್ಟಿ ಸತೀಶ್ ಜಾರಕಿಹೊಳಿ ತೋರಿಸಿದ್ದರು. ಸತೀಶ್ ಜಾರಕಿಹೊಳಿ ಹೊರತುಪಡಿಸಿ ಬೇರೆ ಯಾವುದೇ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೆ, ಬಿಜೆಪಿ ಯಾವುದೇ ಶ್ರಮವೇ ಇಲ್ಲದೇ ಈ ಕ್ಷೇತ್ರದಲ್ಲಿ ಗೆದ್ದು ಬೀಗುತ್ತಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಇದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿದರೆ, ಖಂಡಿತವಾಗಿಯೂ ಬಿಜೆಪಿಯನ್ನು ಮಣಿಸುತ್ತಾರೆ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ