ಬಿತ್ತಿದ್ದು ಬೀಟ್ರೂಟ್-ಬಂದಿದ್ದು ಮೂಲಂಗಿ!!! ಕಳಪೆ ಬೀಜದಿಂದ ರೈತ ಕಂಗಾಲು - Mahanayaka

ಬಿತ್ತಿದ್ದು ಬೀಟ್ರೂಟ್–ಬಂದಿದ್ದು ಮೂಲಂಗಿ!!! ಕಳಪೆ ಬೀಜದಿಂದ ರೈತ ಕಂಗಾಲು

poor seed
17/09/2023

ಚಾಮರಾಜನಗರ: ಒಂದೆಡೆ ಮಳೆ ಇಲ್ಲದೇ ರೈತರು ಒದ್ದಾಡುತ್ತಿದ್ದರೇ ಮತ್ತೊಂದೆಡೆ ಬಿತ್ತಿದ್ದ ಬೀಜವೂ ಕೈಕೊಟ್ಟು ರೈತ ಕಂಗಾಲಾದ ಘಟನೆ ಹನೂರು ತಾಲೂಕಿನ‌ ಬಿ.ಜಿ. ದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಹೌದು…, ಹನೂರು ತಾಲೂಕಿನ ಬಿ.ಜಿ ದೊಡ್ಡಿ ಗ್ರಾಮದ ಷಡಕ್ಷರಿ ಎಂಬುವವರು ತಮ್ಮ ಜಮೀನಿನಲ್ಲಿ ಒಂದೂವರೆ  ಬೀಟ್ರೂಟ್ ನ್ನು ಬಿತ್ತನೆ ಮಾಡಿದ್ದರು. ಆದರೆ, ಈಗ ಮೂಲಂಗಿ ರೀತಿ ಬೀಟ್ರೂಟ್ ಬೆಳೆದಿದ್ದು ರೈತನಿಗೆ ದಿಕ್ಕು ತೋಚದೇ ಕಂಗಲಾಗಿದ್ದಾರೆ.

ಒಡೆಯರಪಾಳ್ಯ ಗ್ರಾಮದ ನಾಗಜ್ಯೋತಿ ಆಗ್ರೋ ಸೆಂಟರ್ ನಲ್ಲಿ 9,800 ರೂ. ಕೊಟ್ಟು  ಸಾಕಾಟಾ ಎಂಬ ಕಂಪನಿಯ ಬೀಟ್ರೂಟ್ ಬೀಜ ಖರೀದಿಸಿ   ಒಂದುವರೆ ಎಕರೆಯಲ್ಲಿ ಬೀಟ್ರೂಟ್ ಬಿತ್ತಿದ್ದು ಬೀಟ್ರೂಟ್ ಬೆಳೆಯದೆ ಮೂಲಂಗಿ ಬಂದಿರುವುದರಿಂದ 5 ಲಕ್ಷ ಆದಾಯದ ನೀರಿಕ್ಷೆಯಲ್ಲಿದ್ದ ರೈತ ಷಡಕ್ಷರಿ ಕಂಗಾಲಾಗಿದ್ದಾರೆ.


Provided by

ಆಗ್ರೋ ಸೆಂಟರ್, ಬೀಜ ಕಂಪನಿ ಟೋಪಿ..?:

ಈ ಬಗ್ಗೆ ರೈತ ಆಗ್ರೋ ಸೆಂಟರ್ ಮಾಲೀಕನಿಗೆ ತಿಳಿಸಿದರೆ  ಸಮಸ್ಯೆಯನ್ನು ಬಗೆಹರಿಸುವ ಬದಲು ಏಕವಚನದಲ್ಲಿ ನಿಂದಿಸಿ ಕಳುಹಿಸಿದ್ದಾರೆ ಎಂದು ರೈತ ಆರೋಪಿಸುತ್ತಿದ್ದಾರೆ.  ಇನ್ನು ಸಂಬಂಧಪಟ್ಟ ಸಾಕಾಟಾ ಕಂಪನಿ ಜಮೀನಿಗೆ ಬಂದು ಪರಿಶೀಲನೆ ಮಾಡಿ ತೆರಳಿದರೂ ಯಾವುದೇ ಪರಿಹಾರ ನೀಡುವ ಬಗ್ಗೆ ಮಾತು ಆಡುತ್ತಿಲ್ಲ. ಕಳೆದ ವರ್ಷ ಅತಿ ಹೆಚ್ಚು ಮಳೆ ಬಿದ್ದು ಬೆಳೆದಿದ್ದ ಬೆಳೆಯಲ್ಲ ಕೊಳೆತು ಹೋಗಿ ನಷ್ಟ ಉಂಟಾಗಿತ್ತು. ಈ ಬಾರಿ ಇರುವಷ್ಟು ನೀರಿನಲ್ಲಿ ಬೆಳೆದಿದ್ದ ಬೀಟ್ರೂಟ್ ಮೂಲಂಗಿ ಆಗಿರುವುದು ನಮ್ಮನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಸಂಬಂಧಪಟ್ಟ ಅಧಿಕಾರಿಗಳು ನನಗೆ ಸೂಕ್ತ ಪರಿಹಾರ ಕೊಡಿಸಬೇಕು ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಿ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು  ರೈತ ಷಡಕ್ಷರಿ ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಕಳಪೆ ಬೀಜದಿಂದ ರೈತನ ಬದುಕು ಮೂರಾಬಟ್ಟೆಯಾಗಿದ್ದು ಈ ಸಂಬಂಧ ತೋಟಗಾರಿಕೆ ಇಲಾಖೆ ಸೂಕ್ತ ಕ್ರಮ ವಹಿಸಬೇಕಿದೆ.

ಇತ್ತೀಚಿನ ಸುದ್ದಿ